ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪು ಕನ್ನಡ ಸಹಿತ 10 ಭಾಷೆಗಳಲ್ಲಿ ಲಭ್ಯ: ಸುಪ್ರೀಂಕೋರ್ಟ್

Update: 2023-12-07 17:04 GMT

 ಸುಪ್ರೀಂಕೋರ್ಟ್ | Photo: PTI 

ಹೊಸದಿಲ್ಲಿ: ಸಂವಿಧಾನದ ಮೂಲಭೂತ ಸ್ವರೂಪವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದಂತಹ ಕೇಶವಾನಂದ ಭಾರತಿ ಪ್ರಕರಣದ ಐತಿಹಾಸಿಕ ತೀರ್ಪು ಈಗ ಸುಪ್ರೀಂಕೋರ್ಟ್ ವೆಬ್ ಸೈಟ್ ನಲ್ಲಿ ಹತ್ತು ಭಾಷೆಗಳಲ್ಲಿ ಲಭ್ಯವಿದೆ. ಈ ಮಹತ್ವದ ತೀರ್ಪಿನ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಗುರುವಾರ ತಿಳಿಸಿದ್ದಾರೆ.

1973ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಈ ತೀರ್ಪು, ಸಂವಿಧಾನವನ್ನು ತಿದ್ದುಪಡಿಗೊಳಿಸಲು ಸಂಸತ್ತಿಗೆ ಇರುವ ಅಧಿಕಾರವನ್ನು ಮೊಟಕುಗೊಳಿಸಿತು. ಅಲ್ಲದೆ ಸಂವಿಧಾನಕ್ಕೆ ಮಾಡಲಾಗುವ ಯಾವುದೇ ತಿದ್ದುಪಡಿಯು ಅದರ ಮೂಲಭೂತ ಸ್ವರೂಪವನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಾಮರ್ಶಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿತ್ತು.

‘‘2023ನೇ ಇಸವಿಯಲ್ಲಿ ಕೇಶವಾನಂದ ಭಾರತಿ ಪ್ರಕರಣ ತೀರ್ಪಿಗೆ 50ನೇ ವರ್ಷ ತುಂಬುತ್ತದೆ. ಈ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ವೆಬ್ ಪೇಜ್ ಒಂದನ್ನು ರೂಪಿಸಿದೆ. ಸಮಾಜದ ವಿಸ್ತೃತ ವರ್ಗವನ್ನು ತಲುಪಲು, ಭಾರತೀಯ ಭಾಷೆಗಳಲ್ಲಿ ಆ ತೀರ್ಪನ್ನು ನಾವು ಭಾಷಾಂತರಿಸಬೇಕಾಗಿದೆ ಎಂದು ನಾನು ಭಾವಿಸಿದೆ. ಯಾಕೆಂದರೆ ಭಾಷಾ ತಡೆಗೋಡೆಗಳು, ಜನರಿಗೆ ನ್ಯಾಯಾಲಯದ ಕೆಲಸವನ್ನು ತಿಳಿದುಕೊಳ್ಳದಂತೆ ತಡೆಯುತ್ತದೆ’’ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ಅಕ್ರಮ ವಲಸಿಗರಗೆ ಸಂಬಂಧಿಸಿದ ಪೌರತ್ವ ಕಾಯ್ದೆಯ 6ಎ ಸೆಕ್ಷನ್ನ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಮನವಿಗಳ ಆಲಿಕೆಯನ್ನು ನಡೆಸುವ ಮುನ್ನ ಸಿಜೆಐ ಅವರು ಈ ವಿಷಯವನ್ನು ತಿಳಿಸಿದರು.

ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಈಗ ಹಿಂದಿ, ಕನ್ನಡ, ತೆಲುಗು, ತಮಿಳು, ಒಡಿಯಾ, ಮಲಯಾಳಂ, ಗುಜರಾತಿ, ಬಂಗಾಳಿ, ಅಸ್ಸಾಮಿ ಹಾಗೂ ಮರಾಠಿ ಭಾಷೆಗಳಲ್ಲಿ ಲಭ್ಯವಿರುವುದು ಎಂದು ಸಿಜೆಐ ತಿಳಿಸಿದರು.

1973ರಲ್ಲಿ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರಕಾರ ಪ್ರಕರಣದಲ್ಲಿ ಐತಿಹಾಸಿಕ ತೀರ್ಪಿನಲ್ಲಿ 13 ಸದಸ್ಯ ಬಲದ ಸುಪ್ರೀಂಕೋರ್ಟ್ ನ್ಯಾಯಪೀಠವು ಸಂವಿಧಾನದ ಮೂಲಭೂತ ಸಂರಚನೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲವೆಂದು ಘೋಷಿಸಿತ್ತು ಹಾಗೂ ಸಂವಿಧಾನವನ್ನು ತಿದ್ದುಪಡಿಗೊಳಿಸಲು ಸಂಸತ್ತಿಗೆ ಇರುವ ಅಧಿಕಾರವನ್ನು ನಿರ್ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News