ಕುವೈತ್ ಅಗ್ನಿ ದುರಂತ | ತಮ್ಮ ಪ್ರೀತಿಪಾತ್ರರ ಸಾವಿನಿಂದ ಆಘಾತಕ್ಕೊಳಗಾಗಿರುವ ಕೇರಳ ಗ್ರಾಮಸ್ಥರು
ಕಾಸರಗೋಡು: ತಮ್ಮ ನೂತನ ನಿವಾಸದ ಗೃಹ ಪ್ರವೇಶ ನಡೆದ ನಂತರ, ಸುಮಾರು ಒಂದೂವರೆ ವರ್ಷಗಳ ಹಿಂದೆ ಉತ್ತರ ಕೇರಳ ನಿವಾಸಿಯಾದ ರಂಜಿತ್ ಎಂಬುವವರು ಕುವೈತ್ ಗೆ ತೆರಳಿದ್ದರು. ಅವರು ಜುಲೈ ತಿಂಗಳಲ್ಲಿ ತಮ್ಮ ಸ್ವಗ್ರಾಮಕ್ಕೆ ರಜೆಯ ಮೇಲೆ ಮರಳುವ ಯೋಜನೆ ಹೊಂದಿದ್ದರು ಎನ್ನಲಾಗಿದೆ.
ಆದರೆ, ದಕ್ಷಿಣ ಕುವೈತ್ ನ ನಗರವಾದ ಮಂಗಫ್ ನ ಕಟ್ಟಡವೊಂದರಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 49 ಮಂದಿ ವಿದೇಶಿ ಕಾರ್ಮಿಕರು ಮೃತಪಟ್ಟಿದ್ದು, ಈ ಪೈಕಿ 40 ಮಂದಿ ಭಾರತೀಯರೂ ಸೇರಿದ್ದಾರೆ. ಉಳಿದ ಐವತ್ತು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟಿರುವ 40 ಮಂದಿ ಭಾರತೀಯರ ಪೈಕಿ ರಂಜಿತ್ ಕೂಡಾ ಸೇರಿದ್ದಾರೆ ಎಂಬ ಅನಧಿಕೃತ ಸುದ್ದಿ ಇಡೀ ಗ್ರಾಮಸ್ಥರನ್ನು ತಲ್ಲಣಗೊಳಿಸಿದೆ.
ರಂಜಿತ್ ತಮ್ಮ ದಯಾಳು ಹಾಗೂ ಅವಲಂಬಿಸಬಹುದಾದ ವ್ಯಕ್ತಿತ್ವದಿಂದ ಜನಪ್ರಿಯರಾಗಿದ್ದರು. ತಮ್ಮ ಜೀವನದುದ್ದಕ್ಕೂ ಹಲವಾರು ಕಠಿಣ ಪರಿಸ್ಥಿತಿಗಳನ್ನು ಹಾದು ಬಂದಿದ್ದ ರಂಜಿತ್ ರ ವೃದ್ಧ ಪೋಷಕರಿಗೆ ತಮ್ಮ ಪುತ್ರನೇ ಆಸರೆಯಾಗಿದ್ದರು.
ಈ ಕುರಿತು ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ನೆರೆಯ ವ್ಯಕ್ತಿಯೊಬ್ಬರು, “ಅವರು ಮನೆಯೊಂದನ್ನು ನಿರ್ಮಿಸಿದ್ದರು ಹಾಗೂ ಆ ಮನೆಯ ಗೃಹ ಪ್ರವೇಶ ಒಂದೂವರೆ ವರ್ಷಗಳ ಹಿಂದಷ್ಟೆ ನಡೆದಿತ್ತು. ಅವರು ಜುಲೈ ತಿಂಗಳಲ್ಲಿ ರಜೆಯ ಮೇಲೆ ಮನೆಗೆ ಮರಳಲು ಯೋಜಿಸಿದ್ದರು. ಆದರೆ, ಇಂತಹ ದುರಂತ ನಡೆದು ಹೋಗಿದೆ” ಎಂದು ಖೇದ ವ್ಯಕ್ತಪಡಿಸಿದ್ದಾರೆ.