‘‘ಉದ್ಯೋಗಕ್ಕಾಗಿ ಭೂಮಿ’’ ಪ್ರಕರಣ: ತೇಜಸ್ವಿ ಯಾದವ್‌ಗೆ ಈ.ಡಿ.ಯಿಂದ ಹೊಸ ಸಮನ್ಸ್
ಹೊಸದಿಲ್ಲಿ: ‘‘ರೈಲ್ವೆ ಉದ್ಯೋಗಕ್ಕಾಗಿ ಭೂಮಿ’’ ಹಗರಣದಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ ಶನಿವಾರ ಹೊಸ ಸಮನ್ಸ್ ನೀಡಿದೆ ಹಾಗೂ ಜನವರಿ 5ರಂದು ಹಾಜರಾಗುವಂತೆ ಸೂಚಿಸಿದೆ.
ಈ ಹಿಂದೆ ಡಿಸೆಂಬರ್ 22ರಂದು ಹಾಜರಾಗುವಂತೆ ತೇಜಸ್ವಿ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು. ಆದರೆ, ಅವರು ಹಾಜರಾಗಿರಲಿಲ್ಲ. ಅಲ್ಲದೆ, ಜಾರಿ ನಿರ್ದೇಶನಾಲಯದ ನೋಟಿಸನ್ನು ವಾಡಿಕೆಯ ವ್ಯವಹಾರ ಎಂದು ಕರೆದಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಡಿಸೆಂಬರ್ 27ರಂದು ಹೊಸದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿಯಲ್ಲಿ ಹಾಜರಾಗುವಂತೆ ತೇಜಸ್ವಿ ಯಾದವ್ ಅವರ ತಂದೆ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ.
ಯುಪಿಎ-1 ಸರಕಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಹಗರಣ ಇದಾಗಿದೆ.
2004ರಿಂದ 2009ರ ವರೆಗೆ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದ ಸದಸ್ಯರು ಹಾಗೂ ಅವರು ನಂಟು ಹೊಂದಿರುವ ಎ.ಕೆ. ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಉದ್ಯೋಗ ಆಕಾಂಕ್ಷಿಗಳು ತಮ್ಮ ಜಮೀನನ್ನು ಹಸ್ತಾಂತರಿಸಿದ ಬಳಿಕ ಅವರಿಗೆ ವಿವಿಧ ರೈಲ್ವೆ ವಲಯಗಳಲ್ಲಿ ‘ಡಿ’ ವರ್ಗದ ಹುದ್ದೆಯನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.