ಸರಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳಲಿ:ಮಲ್ಲಿಕಾರ್ಜುನ ಖರ್ಗೆ

Update: 2023-12-21 16:11 GMT

 ಮಲ್ಲಿಕಾರ್ಜುನ ಖರ್ಗೆ | Photo PTI

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟದ ಸಂಸದರು ಗುರುವಾರ ಸಂಸತ್ತಿನಿಂದ ವಿಜಯ ಚೌಕ್ ವರೆಗೆ ಜಾಥಾದಲ್ಲಿ ಸಾಗಿ ಪ್ರತಿಪಕ್ಷಗಳ ಸಂಸದರ ಸಾಮೂಹಿಕ ಅಮಾನತನ್ನು ಪ್ರತಿಭಟಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಸದನದೊಳಗೆ ಭದ್ರತೆ ಉಲ್ಲಂಘನೆ ವಿಷಯವನ್ನು ಮಾತನಾಡದೆ ಸಂಸದೀಯ ವಿಶೇಷಾಧಿಕಾರವನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ಸಂದರ್ಭದಲ್ಲಿ ಪ್ರತಿಪಾದಿಸಿದರು. ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುವಂತೆ ಅವರು ಸರಕಾರವನ್ನು ಆಗ್ರಹಿಸಿದರು.

‘ಪ್ರಜಾಪ್ರಭುತ್ವವನ್ನು ರಕ್ಷಿಸಿ ’ ಎಂಬ ಬೃಹತ್ ಬ್ಯಾನರ್ ಮತ್ತು ‘ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ’ ‘ಸಂಸತ್ತು ಪಂಜರದಲ್ಲಿ ಬಂದಿಯಾಗಿದೆ’ ಮತ್ತು ‘ಪ್ರಜಾಪ್ರಭುತ್ವವನ್ನು ಉಚ್ಚಾಟಿಸಲಾಗಿದೆ ’ ಇತ್ಯಾದಿ ಬರಹಗಳಿದ್ದ ಫಲಕಗಳೊಂದಿಗೆ ಸಂಸದರು ಜಾಥಾ ನಡೆಸಿದರು.

ವಿಜಯ ಚೌಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಪ್ರಜಾಪ್ರಭುತ್ವದಲ್ಲಿ ಮಾತನಾಡುವುದು ಪ್ರತಿಪಕ್ಷಗಳ ಹಕ್ಕು ಆಗಿದೆ ಮತ್ತು ಜನರ ಭಾವನೆಗಳನ್ನು ಸಂಸತ್ತಿನಲ್ಲಿ ತಿಳಿಸುವುದು ಜನ ಪ್ರತಿನಿಧಿಗಳಾಗಿ ಸಂಸದರ ಜವಾಬ್ದಾರಿಯಾಗಿದೆ. ಸಂಸತ್ ಭದ್ರತಾ ವೈಫಲ್ಯ ಕುರಿತು ಮಾತನಾಡಲು ಪ್ರತಿಪಕ್ಷವು ಬಯಸಿತ್ತು,ಪ್ರಧಾನಿ ಮೋದಿಯವರು ಇತರೆಡೆಗಳಲ್ಲಿ ಭಾಷಣಗಳನ್ನು ಬಿಗಿಯುತ್ತಿದ್ದರೂ ಅವರಾಗ್‌ಲೀ ಗೃಹಸಚಿವ ಅಮಿತ್ ಶಾ ಅವರಾಗ್‌ಲೀ ಲೋಕಸಭೆ ಅಥವಾ ರಾಜ್ಯಸಭೆಗೆ ಬರಲಿಲ್ಲ ಎಂದು ಹೇಳಿದರು.

‘ಸಂಸತ್ ಭದ್ರತಾ ವೈಫಲ್ಯವು ಹೇಗೆ ಸಂಭವಿಸಿತ್ತು ಮತ್ತು ಇದಕ್ಕೆ ಯಾರು ಹೊಣೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಷಯವನ್ನು ಪ್ರಸ್ತಾವಿಸಲು ನಾವು ಬಯಸಿದ್ದೆವು ’ಎಂದು ಹೇಳಿದ ಖರ್ಗೆ,ಸಂಸತ್ತು ದೊಡ್ಡ ಪಂಚಾಯತ್ ಆಗಿದೆ. ಸಂಸತ್ತಿನಲ್ಲಿ ಮಾತನಾಡದಿದ್ದರೆ ಬೇರೆಲ್ಲಿ ಮಾತನಾಡಬೇಕು? ಭದ್ರತಾ ವೈಫಲ್ಯದ ಬಗ್ಗೆ ತಿಳಿಸಲು ಮೋದಿ ಮತ್ತು ಶಾ ಸದನಕ್ಕೆ ಬಾರದಿರುವುದು ದುರದೃಷ್ಟಕರ. ಸದನದೊಳಗೆ ಮಾತನಾಡಬೇಕಿದ್ದ ವಿಷಯಗಳನ್ನು ಅವರು ಹೊರಗಡೆ ಮಾತನಾಡಿದ್ದಾರೆ ಎಂದರು.

ಆಡಳಿತ ಪಕ್ಷದ ಸದಸ್ಯರು ಕಲಾಪಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಖರ್ಗೆ,ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಮತ್ತು ಅದು ಚರ್ಚೆಯನ್ನು ಬಯಸುವುದಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಸರಕಾರವು ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News