LIC ವೆಬ್ ಸೈಟ್ ಮೂಲಕ ಹಿಂದಿ ಹೇರಿಕೆ ಆರೋಪ; ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ
ಚೆನ್ನೈ: ಭಾರತೀಯ ಜೀವ ವಿಮಾ ನಿಗಮ (LIC) ಭಾಷಾ ವಿವಾದದ ಕೇಂದ್ರ ಬಿಂದುವಾಗಿದ್ದು, ವೆಬ್ ಸೈಟ್ ನ ಮುಖಪುಟದಲ್ಲಿನ ಮಾಹಿತಿಗಳು ಹಿಂದಿ ಭಾಷೆಯಲ್ಲಿ ಕಾಣಿಸಿಕೊಂಡಿದೆ. ಇದನ್ನು ಹಿಂದಿ ಹೇರಿಕೆ ಎಂದು ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಎಲ್ ಐಸಿಯ ನವೀಕರಿಸಿದ ವೆಬ್ ಸೈಟ್ ನಲ್ಲಿ ಎಲ್ಲವೂ ಹಿಂದಿಯಲ್ಲಿ ಬರೆಯಲಾಗಿತ್ತು. ಇಂಗ್ಲಿಷ್ ಗೆ ಬದಲಾವಣೆ ಕುರಿತ ಆಯ್ಕೆಯೂ ಹಿಂದಿಯಲ್ಲಿತ್ತು. ತಮಿಳುನಾಡಿನಲ್ಲಿ ಈ ಬಗ್ಗೆ ವ್ಯಾಪಕವಾದ ಅಸಮಾಧಾನ ವ್ಯಕ್ತವಾಗಿದ್ದು, LIC ಹಿಂದಿಯೇತರ ಭಾಷಿಕರಿಗೆ ಸೇವೆ ಸಲ್ಲಿಸಲು ಸಿದ್ಧರಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಪ್ರತಿಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ತಮಿಳುನಾಡಿನ ಬಹುತೇಕ ಎಲ್ಲ ರಾಜಕೀಯ ನಾಯಕರು ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ.
ಎಲ್ಐಸಿ ವೆಬ್ ಸೈಟ್ ಅನ್ನು ಹಿಂದಿ ಹೇರಿಕೆಯ ಪ್ರಚಾರ ಸಾಧನವಾಗಿ ಪರಿವರ್ತಿಸಲಾಗಿದೆ. ಇಂಗ್ಲಿಷ್ ಅನ್ನು ಆಯ್ಕೆ ಮಾಡಿ ಎಂಬ ಆಯ್ಕೆಯನ್ನು ಕೂಡ ಹಿಂದಿಯಲ್ಲಿ ಬರೆಯಲಾಗಿದೆ. ಇದು ಬಲವಂತವಾಗಿ ಸಂಸ್ಕೃತಿ ಮತ್ತು ಭಾಷಾ ಹೇರಿಕೆಯೇ ಹೊರತು ಬೇರೇನೂ ಅಲ್ಲ. ಎಲ್ಐಸಿಯು ಎಲ್ಲಾ ಭಾರತೀಯರ ಪ್ರೋತ್ಸಾಹದಿಂದ ಬೆಳೆದಿದೆ. ಈ ಭಾಷಾ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡಿನ ಪ್ರತಿಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಬಿಜೆಪಿ ಸರ್ಕಾರ ಎಲ್ಲೆಲ್ಲ ಸಾಧ್ಯವೋ ಅಲ್ಲಿ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.