ಲಿವ್ ಇನ್ ಸಂಗಾತಿಗೆ ಚೂರಿ ಇರಿದು ಹತ್ಯೆ; ಆರೋಪಿಯ ಬಂಧನ
ಇಂಧೋರ್: ದೈಹಿಕ ಸಂಪರ್ಕ ನಿರಾಕರಿಸಿದ ತನ್ನ 20 ವರ್ಷದ ಲಿವ್ ಇನ್ ಸಂಗಾತಿ ಯುವತಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಮೂಲತಃ ಮಧ್ಯಪ್ರದೇಶದ ಗುಣಾ ಜಿಲ್ಲೆಯ ನಿವಾಸಿ ಪ್ರವೀಣ್ ಸಿಂಗ್ ಧಾಕಡ್ (24) ಎಂದು ಗುರುತಿಸಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯವಾದ ಈ ಜೋಡಿ ಕಳೆದ ಕೆಲ ದಿನಗಳಿಂದ ಇಂಧೋರ್ ನ ರಾವ್ ಜಿ ಬಜಾರ್ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹತ್ಯೆ ನಡೆದ ಎರಡು ದಿನಗಳ ಬಳಿಕ ಮೃತದೇಹವನ್ನು ಪತ್ತೆ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಭಿನಯ ವಿಶ್ವಕರ್ಮ ಸುದ್ದಿಗಾರರಿಗೆ ತಿಳಿಸಿದರು.
ಆರೋಪಿಯು ತನ್ನ ಲಿವ್ ಇನ್ ಸಂಗಾತಿ ಲೈಂಗಿಕತೆಗೆ ನಿರಾಕರಿಸಿದಾಗ ಕೋಪಗೊಂಡು, ಕತ್ತರಿಯಿಂದ ಕುತ್ತಿಗೆಗೆ ಇರಿದು ಸಾಯಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದರಿಂದ ಭೀತಿಗೊಂಡ ಆರೋಪಿ ಬಾಡಿಗೆ ಮನೆಗೆ ಹೊರಗಿನಿಂದ ಬೀಗ ಜಡಿದು ಆಕೆಯ ಮೊಬೈಲ್ ಫೋನ್ ನೊಂದಿಗೆ ಪರಾರಿಯಾಗಿದ್ದ. ಇದು ಹತ್ಯೆ ಪ್ರಕರಣ ಎನ್ನುವುದು ದೃಢಪಟ್ಟ ಬಳಿಕ ಧಾಕಡ್ ನನ್ನು ಪತ್ತೆ ಮಾಡಲಾಯಿತು ಎಂದು ಅವರು ಹೇಳಿದರು.