ಲೋಕಸಭಾ ಚುನಾವಣೆ | ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಪ್ರಾದೇಶಿಕ ಪಕ್ಷಗಳಿಗೇ ಹೆಚ್ಚು ಅನುಕೂಲಕರ

Update: 2024-03-17 16:19 GMT

ಸಾಂದರ್ಭಿಕ ಚಿತ್ರ | Photo: PTI

ಹೊಸದಿಲ್ಲಿ :ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಅಥವಾ ಒಂದು ಅಥವಾ ಎರಡು ರಾಜ್ಯಗಳಲ್ಲಿ ಮಾತ್ರ ತಮ್ಮ ಅಸ್ತಿತ್ವ ಹೊಂದಿರುವ ಪಕ್ಷಗಳಿಗೆ ಒಂದೋ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿದೆ. ಇಲ್ಲವೆ, ಬಿಜೆಪಿಗೆ ಸೈದ್ಧಾಂತಿಕ ವಿರೋಧಿಯಾಗಿದ್ದರೆ, ಕಾಂಗ್ರೆಸ್ ಪರ ವಾಲಬೇಕಿದೆ. ಹೀಗಿದ್ದೂ ಹಲವಾರು ಪಕ್ಷಗಳು ಸುರಕ್ಷತೆಯ ಕಾರಣಕ್ಕೆ ತಟಸ್ಥತೆಯನ್ನು ಆಯ್ದುಕೊಂಡಿದ್ದು, ಕೇಂದ್ರದಲ್ಲಿ ಪ್ರಬಲವಾಗಿರುವ ಬಿಜೆಪಿಯತ್ತ ಹೆಚ್ಚು ವಾಲಿವೆ.

ಡಿಎಂಕೆ: ತಮಿಳುನಾಡಿನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಎತ್ತಿ ನಡೆಯಲಿದೆಯೆ?

ಅನಾರೋಗ್ಯದಿಂದ ಜಯಲಲಿತಾರ ಪ್ರಭಾವ ಮಸುಕಾದ ನಂತರ ಹಾಗೂ ಎಐಎಡಿಎಂಕೆಯನ್ನು ತನ್ನತ್ತ ಸೆಳೆದಾಗಿನಿಂದ ಬಿಜೆಪಿಯು ತಮಿಳುನಾಡಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಆದರೆ, 2021ರಲ್ಲಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ಡಿಎಂಕೆ, ರಾಜ್ಯವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಬಲವಾದ ತಮಿಳು ಪರ ಭಾವುಕತೆಯು ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎಐಎಡಿಎಂಕೆಗೆ ಘಾಸಿಯುಂಟು ಮಾಡಿದ್ದು, ಹೀಗಾಗಿಯೇ ಅದು ಬಿಜೆಪಿಯಿಂದ ದೂರಾಗಿದೆ.

ಆದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೆ, ಬಿಜೆಪಿಯ ಆಕ್ರಮಣಕಾರಿ ನೂತನ ಅಧ್ಯಕ್ಷ ಕೆ.ಅಣ್ಣಾಮಲೈ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಡಿಎಂಕೆ ನಾಯಕರು ಸನಾತನ ಧರ್ಮದ ನಿರ್ಮೂಲನೆ ಕುರಿತು ಹೇಳಿಕೆ ನೀಡಿರುವುದು ಹಾಗೂ ಶಕ್ತಿಶಾಲಿ ಕೇಂದ್ರ ಸರಕಾರದ ವಿರುದ್ಧ ಎಚ್ಚರಿಕೆ ನೀಡಿರುವುದನ್ನೇ ದಾಳವಾಗಿಸಿಕೊಂಡಿರುವ ಬಿಜೆಪಿಯು, ಡಿಎಂಕೆಯನ್ನು ಹಿಂದೂ ವಿರೋಧಿ ಹಾಗೂ ವಿಭಜನಾಕಾರಿ ಪಕ್ಷ ಎಂದು ಬಿಂಬಿಸಲು ಮುಂದಾಗಿದೆ.

ಆದರೆ, 2019ರಲ್ಲಿ ಎಡ ಪಕ್ಷಗಳನ್ನೂ ಹೊಂದಿದ್ದ ಮೈತ್ರಿಯನ್ನು ಡಿಎಂಕೆಯೊಂದಿಗೆ ಮಾಡಿಕೊಂಡಿದ್ದ ಕಾಂಗ್ರೆಸ್, ಆ ಚುನಾವಣೆಯಲ್ಲಿ 39 ಸ್ಥಾನಗಳ ಪೈಕಿ 38 ಸ್ಥಾನಗಳಲ್ಲಿ ಮೈತ್ರಿಕೂಟವು ಜಯಭೇರಿ ಬಾರಿಸಿತ್ತು. ಆಗ ಎಐಡಿಎಂಕೆಯನ್ನು ತನ್ನ ಮೈತ್ರಿಕೂಟದಲ್ಲಿ ಹೊಂದಿದ್ದ ಎನ್ ಡಿಎ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಬಿಜೆಪಿ ಶೂನ್ಯ ಸಂಪಾದನೆ ಮಾಡಿತ್ತು.

ಈ ಬಾರಿ ಎಐಎಡಿಎಂಕೆ ಮೈತ್ರಿಕೂಟದಿಂದ ಹೊರ ನಡೆದಿದ್ದು, ಎಐಎಡಿಎಂಕೆಯಲ್ಲಿನ ಭಿನ್ನಮತೀಯ ಬಣದ ನೇತೃತ್ವ ವಹಿಸಿರುವ ಒ. ಪನ್ನೀರ್ ಸೆಲ್ವಂ ಹಾಗೂ ಟಿಟಿವಿ ದಿನಕರನ್ ಅವರೊಂದಿಗೆ ಬಿಜೆಪಿಯು ಮೈತ್ರಿ ಮಾತುಕತೆ ನಡೆಸುತ್ತಿದೆ.

ಟಿಎಂಸಿ: ಬಿಜೆಪಿಯನ್ನು ತಡೆಯಬಲ್ಲದೆ?

ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪ್ರಬಲ ಪಕ್ಷವಾಗಿದೆ. ಹೀಗಿದ್ದೂ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಗಮನಾರ್ಹ ನೆಲೆ ಕಂಡುಕೊಂಡಿದೆ. 2019ರ ಚುನಾವಣೆಯಲ್ಲಿ 22 ಸ್ಥಾನ ಗಳಿಸಿದ್ದ ಟಿಎಂಸಿ ಎದುರು 18 ಸ್ಥಾನಗಳನ್ನು ಗಳಿಸುವ ಮೂಲಕ ಟಿಎಂಸಿಯನ್ನು ಬಿಜೆಪಿ ನಿಬ್ಬೆರಗಾಗಿಸಿತ್ತು. ಆದರೆ, 2021ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವ ಮೂಲಕ ಟಿಎಂಸಿಯು ಬಿಜೆಪಿಯ ಆತ್ಮವಿಶ್ವಾಸವನ್ನು ಕದಡಿತ್ತು.

ಆದರೆ, ಟಿಎಂಸಿಯ ಭದ್ರಕೋಟೆಯಾಗಿದ್ದ ಸಂದೇಶ್ ಖಾಲಿಯಲ್ಲಿನ ಅಧ್ಯಾಯವು ಟಿಎಂಸಿಗೆ ಹಾನಿಯನ್ನುಂಟು ಮಾಡುವ ಸಾಧ್ಯಸತೆ ಇದೆ. ಆದರೆ, ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವು, ಅದರ ಲಾಭದ ನಿರೀಕ್ಷೆಯಲ್ಲಿದೆ. ಪೌರತ್ವ ತಿದ್ದುಪಡಿಯ ಬಹು ದೊಡ್ಡ ಫಲಾನುಭವಿಗಳು ಬಾಂಗ್ಲಾದೇಶ ತೊರೆದು ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ನಿರಾಶ್ರಿತರೇ ಆಗಿದ್ದಾರೆ.

ಹೀಗಿದ್ದೂ, ಮಮತಾ ಬ್ಯಾನರ್ಜಿಯ ಬಹು ದೊಡ್ಡ ಭರವಸೆಯೆಂದರೆ, ರಾಜ್ಯದಲ್ಲಿ ಶೇ. 27-30ರಷ್ಟಿರುವ ಮುಸ್ಲಿಮರಾಗಿದ್ದಾರೆ.

ಇದೇ ರೀತಿ ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ, ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆ,ರ್ಸಿಬಪಿ ಪಕ್ಷ, ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ, ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು ರಾಷ್ಟ್ರ ರಾಜಕಾರಣದ ದಿಕ್ಕನ್ನು ನಿರ್ಧರಿಸಬಲ್ಲ ಶಕ್ತಿ ಹೊಂದಿರುವ ಪ್ರಮುಖ ರಾಜಕೀಯ ಪಕ್ಷಗಳಾಗಿವೆ. ಈ ಬಾರಿಯ ಲೋಕಸಭಾ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕಿಂತ ಮೇಲಿನ ಪ್ರಾದೇಶಿಕ ಪಕ್ಷಗಳ ಪಾಲಿಗೇ ಹೆಚ್ಚು ನಿರ್ಣಾಯಕವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News