ಒಡಿಶಾ: ಚಲಿಸುತ್ತಿದ್ದ ರೈಲಿನ ಮೇಲೆ ಗುಂಡಿನ ದಾಳಿ
Update: 2024-11-05 21:18 IST

ಸಾಂದರ್ಭಿಕ ಚಿತ್ರ
ಒಡಿಶಾ: ಭದ್ರಕ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಮಂಗಳವಾರ ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ನಂದನ್ ಕಾನನ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯ ಬೆನ್ನಲ್ಲಿ ಭಾರತೀಯ ರೈಲ್ವೇ ಇಲಾಖೆ ತನಿಖೆಯನ್ನು ಪ್ರಾರಂಭಿಸಿದೆ.
ಭದ್ರಕ್ ಜಿಲ್ಲೆಯ ಚರಂಪಾ ರೈಲ್ವೇ ಸ್ಟೇಷನ್ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆ ಬಳಿಕ ನಂದನ್ ಕಾನನ್ ಎಕ್ಸ್‌ಪ್ರೆಸ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲು ಸಂಖ್ಯೆ 12816 ಆನಂದ್ ವಿಹಾರ್-ಪುರಿ ನಂದನ್ ಕಾನನ್ ಎಕ್ಸ್‌ಪ್ರೆಸ್ ಗಾರ್ಡ್ ವ್ಯಾನ್‌ನ ಕಿಟಕಿಗೆ ಎರಡು ಬುಲೆಟ್‌ಗಳು ತಗುಲಿದೆ. ರೈಲು ಭದ್ರಕ್ ನಿಲ್ದಾಣದಿಂದ ಹೊರಟ ಐದು ನಿಮಿಷಗಳಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.