ಭಾರತ ಬ್ರ್ಯಾಂಡ್ ಹಂತ-2 | ರಿಯಾಯಿತಿ ದರಗಳಲ್ಲಿ ಗೋದಿಹಿಟ್ಟು, ಅಕ್ಕಿ ಮಾರಾಟ ಆರಂಭ
ಹೊಸದಿಲ್ಲಿ : ಬೆಲೆಯೇರಿಕೆಯಿಂದ ಬಳಕೆದಾರರಿಗೆ ಪರಿಹಾರವನ್ನು ಒದಗಿಸಲು ಸರಕಾರವು ಭಾರತ ಬ್ರ್ಯಾಂಡ್ ನಡಿ ರಿಯಾಯಿತಿ ದರಗಳಲ್ಲಿ ಗೋದಿಹಿಟ್ಟು ಮತ್ತು ಅಕ್ಕಿಯ ಎರಡನೇ ಹಂತದ ಚಿಲ್ಲರೆ ಮಾರಾಟಕ್ಕೆ ಮಂಗಳವಾರ ಚಾಲನೆ ನೀಡಿದೆ.
ಸಹಕಾರಿ ಸಂಸ್ಥೆಗಳಾದ ಎನ್ಸಿಸಿಎಫ್,ನಫೆಡ್ ಮತ್ತು ಕೇಂದ್ರೀಯ ಭಂಡಾರ ಹಾಗೂ ಇ-ಕಾಮರ್ಸ್ ತಾಣಗಳ ಮೂಲಕ 5 ಮತ್ತು 10 ಕೆಜಿ ಪ್ಯಾಕೆಟ್ಗಳಲ್ಲಿ ಕೆಜಿಗೆ 30 ರೂ.ದರದಲ್ಲಿ ಗೋದಿಹಿಟ್ಟು ಮತ್ತು 34 ರೂ.ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗುವುದು.
ಸಹಕಾರಿ ಸಂಸ್ಥೆಗಳ ಮೊಬೈಲ್ ವಾಹನಗಳಿಗೆ ಚಾಲನೆ ನೀಡಿದ ಆಹಾರ ಸಚಿವ ಪ್ರಹ್ಲಾದ ಜೋಶಿ ಅವರು, ಇದು ಬಳಕೆದಾರರಿಗೆ ಪರಿಹಾರವನ್ನು ಒದಗಿಸಲು ತಾತ್ಕಾಲಿಕ ಮಧ್ಯಪ್ರವೇಶವಾಗಿದೆ ಎಂದು ಹೇಳಿದರು.
‘ಬೆಲೆ ಸ್ಥಿರೀಕರಣ ನಿಧಿಯಡಿ ಎರಡನೇ ಹಂತಕ್ಕಾಗಿ ಭಾರತೀಯ ಆಹಾರ ನಿಗಮದಿಂದ 3,69,00 ಟನ್ ಗೋದಿ ಮತ್ತು 2,91,000 ಟನ್ ಅಕ್ಕಿಯನ್ನು ಸರಕಾರವು ಹಂಚಿಕೆ ಮಾಡಿದೆ. ಹಂಚಿಕೆ ಮಾಡಲಾದ ದಾಸ್ತಾನು ತೀರುವವರೆಗೆ ಮಾರಾಟ ಮುಂದುವರಿಯಲಿದೆ. ನಮ್ಮ ಬಳಿ ಸಾಕಷ್ಟು ದಾಸ್ತಾನು ಲಭ್ಯವಿದೆ,ಅಗತ್ಯವಿದ್ದರೆ ಮತ್ತೆ ಹಂಚಿಕೆ ಮಾಡುತ್ತೇವೆ ’ಎಂದರು.
ಮೊದಲ ಹಂತದಲ್ಲಿ ಪ್ರತಿ ಕೆಜಿಗೆ 27.50 ರೂ.ದರದಲ್ಲಿ ಗೋದಿಹಿಟ್ಟು ಮತ್ತು 29 ರೂ.ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಗಿತ್ತು.
ಮೊದಲ ಹಂತದಲ್ಲಿ ಕಡಿಮೆ ಪ್ರಮಾಣದಲ್ಲಿ ಅಕ್ಕಿ ಮಾರಾಟದ ಕುರಿತು ಕಳವಳವನ್ನು ನಿವಾರಿಸಿದ ಜೋಶಿ,‘ಸರಕಾರದ ಉದ್ದೇಶ ವ್ಯಾಪಾರ ಮಾಡುವುದಲ್ಲ. ಬಳಕೆದಾರರಿಗೆ ನೆಮ್ಮದಿಯನ್ನು ಒದಗಿಸುವುದು ಮತ್ತು ಮಾರುಕಟ್ಟೆಯಲ್ಲಿ ಬೆಲೆಗಳನ್ನು ನಿಯಂತ್ರಿಸುವುದು ನಮ್ಮ ಉದ್ದೇಶವಾಗಿದೆ. ಬೇಡಿಕೆಯಿದ್ದರೆ ಸಣ್ಣ ಗಾತ್ರದ ಪ್ಯಾಕೆಟ್ ಗಳಲ್ಲಿಯೂ ಇವುಗಳನ್ನು ಪೂರೈಸಲಾಗುವುದು ’ಎಂದರು.