ಲೋಕಸಭಾ ಚುನಾವಣೆ | ಮನ್ ಮೋಹನ್ ಸಿಂಗ್, ಎಲ್.ಕೆ.ಆಡ್ವಾಣಿ ಅವರಿಂದ ಮನೆಯಿಂದಲೇ ಮತದಾನ
ಹೊಸದಿಲ್ಲಿ: ಮಾಜಿ ಉಪರಾಷ್ಟ್ರಪತಿ ಮುಹಮ್ಮದ್ ಹಾಮಿದ್ ಅನ್ಸಾರಿ, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್,ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಮತ್ತು ಮಾಜಿ ಕೇಂದ್ರ ಸಚಿವ ಡಾ.ಮುರಳಿ ಮನೋಹರ್ ಜೋಶಿ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಮನೆಗಳಿಂದಲೇ ಮತಗಳನ್ನು ಚಲಾಯಿಸಿದ್ದಾರೆ.
ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ(ಸಿಇಒ)ಗಳ ಕಚೇರಿಯು ಹಿರಿಯ ಮತದಾರರು ಮತ್ತು ದಿವ್ಯಾಂಗರು ತಮ್ಮ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯಕ್ಕೆ ಗುರುವಾರ ಚಾಲನೆ ನೀಡಿದ್ದು, ಮೇ 24ರವರೆಗೆ ಇದು ಮುಂದುವರಿಯಲಿದೆ.
ಶುಕ್ರವಾರ ದಿಲ್ಲಿಯ ಎಲ್ಲ ಏಳೂ ಲೋಕಸಭಾ ಕ್ಷೇತ್ರಗಳಲ್ಲಿ 1,409 ಮತದಾರರು ತಮ್ಮ ಮನೆಗಳಿಂದಲೇ ಮತಗಳನ್ನು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿಯು ತಿಳಿಸಿದೆ. ಪಶ್ಚಿಮ ದಿಲ್ಲಿ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆದಿದ್ದು, 299 ಹಿರಿಯ ನಾಗರಿಕರು ಸೇರಿದಂತೆ 348 ಜನರು ತಮ್ಮ ಮನೆಗಳಿಂದ ಮತಗಳನ್ನು ಚಲಾಯಿಸಿದ್ದಾರೆ.
ಮೊದಲ ಎರಡು ದಿನಗಳಲ್ಲಿ ಒಟ್ಟು 2,956 ಮತದಾರರು ತಮ್ಮ ಮನೆಗಳಿಂದ ಮತಗಳನ್ನು ಚಲಾಯಿಸಿದ್ದಾರೆ ಎಂದು ಸಿಇಒ ಕಚೇರಿಯು ತಿಳಿಸಿದೆ.
ಮನ್ ಮೋಹನ್ ಸಿಂಗ್, ಜೋಶಿ ಮತ್ತು ಅನ್ಸಾರಿ ಅವರು ಗುರುವಾರ ಹಾಗೂ ಆಡ್ವಾಣಿಯವರು ಶನಿವಾರ ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದವು.
ದಿಲ್ಲಿಯಲ್ಲಿ ಒಟ್ಟು 5,406 ಹಿರಿಯ ಮತದಾರರು ಮತ್ತು ದಿವ್ಯಾಂಗರು ಮನೆಯಿಂದಲೇ ಮತಗಳನ್ನು ಚಲಾಯಿಸಲು ನೋಂದಣಿಯನ್ನು ಮಾಡಿಕೊಂಡಿದ್ದಾರೆ.
ದಿಲ್ಲಿಯಲ್ಲಿ ಮೇ 25ರಂದು ಮತದಾನ ನಡೆಯಲಿದೆ.