ಉತ್ತರ ಪ್ರದೇಶ ರ‍್ಯಾಲಿಯಲ್ಲಿ ಕಾಲ್ತುಳಿತದಂತಹ ಸನ್ನಿವೇಶ; ಭಾಷಣ ಮಾಡದೇ ನಿರ್ಗಮಿಸಿದ ರಾಹುಲ್, ಅಖಿಲೇಶ್‌

Update: 2024-05-19 16:53 GMT

Credit: PTI Photo

ಪ್ರಯಾಗರಾಜ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಫೂಲ್ಪುರ ಲೋಕಸಭಾ ಕ್ಷೇತ್ರದ ಪಡಿಲಾದಲ್ಲಿ ರವಿವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಲ್ತುಳಿತದಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಇದು ಭದ್ರತಾ ಬೆದರಿಕೆಗಳಿಗೆ ಕಾರಣವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರು ಜನಸಂದಣಿಯನ್ನು ಉದ್ದೇಶಿಸಿ ಭಾಷಣ ಮಾಡದೇ ರ‍್ಯಾಲಿಯಿಂದ ನಿರ್ಗಮಿಸಿದರು.

ಕಾಂಗ್ರೆಸ್ ಮತ್ತು ಎಸ್ಪಿ ಕಾರ್ಯಕರ್ತರು ನಿಯಂತ್ರಣದಲ್ಲಿರಲಿಲ್ಲ ಮತ್ತು ವೇದಿಕೆಯನ್ನು ಹತ್ತಲೂ ಪ್ರಯತ್ನಿಸಿದ್ದರು ಎಂದು ವರದಿಗಳು ತಿಳಿಸಿವೆ.

ರಾಹುಲ್ ಮತ್ತು ಅಖಿಲೇಶ್‌ ಪದೇ ಪದೇ ವಿನಂತಿಸಿಕೊಂಡರೂ ಜನಸಮೂಹ ಶಾಂತಗೊಂಡಿರಲಿಲ್ಲ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು. ಈ ವೇಳೆ ತಮ್ಮೊಳಗೆ ಸಂಕ್ಷಿಪ್ತ ಚರ್ಚೆಯನ್ನು ನಡೆಸಿದ ಉಭಯ ನಾಯಕರು ಯಾವುದೇ ಭದ್ರತಾ ಲೋಪವನ್ನು ತಪ್ಪಿಸಲು ಸ್ಥಳದಿಂದ ನಿರ್ಗಮಿಸಿದರು. ಕಾರ್ಯಕ್ರಮದ ದೃಶ್ಯಾವಳಿಗಳು ಮುರಿದ ಬ್ಯಾರಿಕೇಡ್‌ ಗಳು ಮತ್ತು ಭಾರೀ ಜನಸಂದಣಿಯನ್ನು ತೋರಿಸಿವೆ.

ಫೂಲ್ಪುರ್ದ ರ‍್ಯಾಲಿಯ ಬಳಿಕ ರಾಹುಲ್ ಮತ್ತು ಅಖಿಲೇಶ್‌ ಅಲಹಾಬಾದ್ ಲೋಕಸಭಾ ಕ್ಷೇತ್ರದ ಪ್ರಯಾಗರಾಜ್ ಜಿಲ್ಲೆಯ ಕರಛನಾದ ಮುಂಗಾರಿಗೆ ಆಗಮಿಸಿದ್ದರು. ಇಲ್ಲಿಯೂ ರ‍್ಯಾಲಿಯಲ್ಲಿ ಅಂತಹುದೇ ಸ್ಥಿತಿ ಸೃಷ್ಟಿಯಾಗಿತ್ತು. ಉದ್ರಿಕ್ತ ಗುಂಪು ಬ್ಯಾರಿಕೇಡ್‌ ಗಳನ್ನು ಭೇದಿಸಿ ವೇದಿಕೆಯನ್ನು ತಲುಪಲು ಪ್ರಯತ್ನಿಸಿತ್ತು.

ಬಿಹಾರ, ಜಮ್ಮು-ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಐದನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಸೋಮವಾರ ನಡೆಯಲಿದ್ದು, ರಾಹುಲ್ ಗಾಂಧಿ, ರಾಜನಾಥ್ ಸಿಂಗ್ ಮತ್ತು ಸ್ಮತಿ ಇರಾನಿ ಸೇರಿದಂತೆ ಹಲವು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News