ಕಾನ್ಪುರ್-ಪ್ರಯಾಗ್ ರಾಜ್ ಮಾರ್ಗದ ರೈಲು ಹಳಿಯ ಮೇಲೆ LPG ಸಿಲಿಂಡರ್ ಪತ್ತೆ; ತಪ್ಪಿದ ಅನಾಹುತ
ಪ್ರೇಮ್ ಪುರ್ (ಉತ್ತರ ಪ್ರದೇಶ): ರವಿವಾರ ಉತ್ತರ ಪ್ರದೇಶದ ಪ್ರೇಮ್ ಪುರ್ ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಮೇಲೆ ಎಲ್ಪಿಜಿ ಸಿಲಿಂಡರ್ ಕಂಡು ಬಂದಿದ್ದು, ಗೂಡ್ಸ್ ರೈಲಿನ ಲೋಕೋಪೈಲಟ್ ತುರ್ತು ಬ್ರೇಕ್ ಅನ್ನು ಹಾಕುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ರೈಲ್ವೆ ಪೊಲೀಸರು ಈ ಎಲ್ಪಿಜಿ ಸಿಲಿಂಡರ್ ಅನ್ನು ತೆರವುಗೊಳಿಸಿದ್ದು, ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಉತ್ತರ ಕೇಂದ್ರ ರೈಲ್ವೆ ವಲಯದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ, “ಇಂದು ಬೆಳಗ್ಗೆ 4.50ರ ವೇಳೆಗೆ ಪ್ರೇಮ್ ಪುರ್ ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಮೇಲೆ ಅನಿಲ ಸಿಲಿಂಡರ್ ಕಂಡು ಬಂದಿದ್ದು, ಕಾನ್ಪುರದಿಂದ ಪ್ರಯಾಗ್ ರಾಜ್ ನೆಡೆಗೆ ತೆರಳುತ್ತಿದ್ದ ಗೂಡ್ಸ್ ರೈಲಿನ ಚಾಲಕ ಕೂಡಲೇ ತುರ್ತು ಬ್ರೇಕ್ ಅನ್ನು ಹಾಕಿದ್ದಾರೆ. ಪರಿಶೀಲನೆಯ ನಂತರ 5 ಲೀಟರ್ ಸಿಲಿಂಡರ್ ಖಾಲಿಯಾಗಿತ್ತು ಎಂದು ಎಂಬುದು ಕಂಡು ಬಂದಿದೆ. ಈ ಘಟನೆಯ ಕುರಿತು ತನಿಖೆ ನಡೆಸಲು ನಿರ್ದೇಶನ ನೀಡಲಾಗಿದೆ” ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪ್ರಯಾಗ್ ರಾಜ್-ಭಿವಾನಿ ಕಲಿಂದಿ ಎಕ್ಸ್ ಪ್ರೆಸ್ ರೈಲು ಹಳಿಗಳ ಮೇಲಿರಿಸಲಾಗಿದ್ದ ಎಲ್ಪಿಜಿ ಸಿಲಿಂಡರ್ ಗೆ ಢಿಕ್ಕಿ ಹೊಡೆದು, ಕೂದಲೆಳೆಯ ಅಂತರದಲ್ಲಿ ಭಾರಿ ಅಪಘಾತವೊಂದು ತಪ್ಪಿತ್ತು.