ಮಧ್ಯಪ್ರದೇಶ| 400 ವರ್ಷದಷ್ಟು ಹಳೆಯ ಕೋಟೆಯ ಗೋಡೆ ಕುಸಿತ: 7 ಮಂದಿ ಮೃತ್ಯು
ಭೋಪಾಲ್: 400 ವರ್ಷದಷ್ಟು ಹಳೆಯದಾದ ಕೋಟೆಯೊಂದರ ಗೋಡೆ ಕುಸಿದ ಪರಿಣಾಮ 7 ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ದಾತಿಯ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಸ್ಥಳೀಯರ ಪ್ರಕಾರ ಈ ಕುಸಿತವು ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಸಂಭವಿಸಿದ್ದು, ಗೋಡೆ ಕುಸಿದು ಬಿದ್ದಾಗ ಭಾರಿ ಸದ್ದು ಕೇಳಿ ಬಂದಿತು ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯ ನಿವಾಸಿಗಳು ಕೂಡಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ತುರ್ತು ಸೇವೆಗಳನ್ನು ಸಂಪರ್ಕಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ಧಾವಿಸಿರುವ ಜಿಲ್ಲಾಧಿಕಾರಿ ಸಂದೀಪ್ ಮಾಕಿನ್, ಪೊಲೀಸ್ ವರಿಷ್ಠಾಧಿಕಾರಿ ವಿರೇಂದ್ರ ಕುಮಾರ್ ಮಿಶ್ರಾ, ಕೊತ್ವಾಲಿ ಟಿಐ ಧೀರೇಂದ್ರ ಮಿಶ್ರಾಹ ಹಾಗೂ SDERF ತಂಡಗಳು, ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿವೆ. ಆದರೆ, ರಕ್ಷಣಾ ಕಾರ್ಯಾಚರಣೆ ನಿಧಾನ ಗತಿಯಲ್ಲಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ನಡುವೆ, ಘಟನಾ ಸ್ಥಳಕ್ಕೆ ಧಾವಿಸಿದ ದಾತಿಯ ಶಾಸಕ ರಾಜೇಂದ್ರ ಭಾರ್ತಿ, ಜಿಲ್ಲಾಡಳಿತದ ಸನ್ನದ್ಧ ಸ್ಥಿತಿಯ ಕೊರತೆಯನ್ನು ಟೀಕಿಸಿದರು. ಘಟನೆಯಲ್ಲಿ ಮೃತಪಟ್ಟವರಿಗೆ ತಲಾ ರೂ. 5 ಲಕ್ಷ ಹಾಗೂ ಗಾಯಾಳುಗಳಿಗೆ ರೂ. 2 ಲಕ್ಷ ಪರಿಹಾರ ವಿತರಿಸಬೇಕು ಎಂದು ಅವರು ಆಗ್ರಹಿಸಿದರು. ಇದರೊಂದಿಗೆ, ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಬೇಕು ಎಂದೂ ಅವರು ಆಗ್ರಹಿಸಿದರು.
ಸುದ್ದಿ ತಿಳಿಯುತ್ತಿದ್ದಂತೆಯೆ ಮಾಜಿ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡಾ ಭೋಪಾಲ್ ನಿಂದ ದಾತಿಯಾಗೆ ಧಾವಿಸಿದ್ದಾರೆ.