ಮಧ್ಯಪ್ರದೇಶ: ಬಿಜೆಪಿ ನಾಯಕನನ್ನು ಪಕ್ಷದ ಕಚೇರಿಗೆ ಹಾರ ಹಾಕಿ, ಸಿಹಿ ತಿನ್ನಿಸಿ ಸ್ವಾಗತಿಸಿದ ಇಬ್ಬರು ಕಾಂಗ್ರೆಸ್ ನಾಯಕರ ಅಮಾನತು

Update: 2024-07-29 17:19 GMT

ಸಾಂದರ್ಭಿಕ ಚಿತ್ರ

ಇಂದೋರ್: ಈ ತಿಂಗಳ ಆರಂಭದಲ್ಲಿ ಇಂದೋರ್ ನಗರಕ್ಕೆ ಭೇಟಿ ನೀಡಿದ್ದ ಮಧ್ಯಪ್ರದೇಶ ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯ್ ವರ್ಗೀಯರನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಸಿಹಿ ತಿನ್ನಿಸಿ, ಮಾಲಾರ್ಪಣೆ ಮಾಡಿ ಸ್ವಾಗತಿಸಿರುವ ಘಟನೆ ಬೆಳಕಿಗೆ ಬಂದ ಬೆನ್ನಿಗೇ, ಇಂದೋರ್ ಕಾಂಗ್ರೆಸ್ ಘಟಕದ ಇಬ್ಬರು ನಾಯಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು indianexpress.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ನಗರದಲ್ಲಿ 51 ಲಕ್ಷ ಸಸಿ ನೆಡಲು ಇಂದೋರ್ ನಿವಾಸಿಗಳ ನೆರವಿಗೆ ಮನವಿ ಮಾಡಲು ಕಾಂಗ್ರೆಸ್ ಪಕ್ಷದ ಸಹಕಾರವನ್ನು ಕೋರಿ, ವಿಜಯ್ ವರ್ಗೀಯ ಇಂದೋರ್ ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಕಚೇರಿಗೆ ಅವರಿಗೆ ಸಿಹಿ ತಿನ್ನಿಸಿ, ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಲಾಗಿತ್ತು ಎಂದು ಹೇಳಿದ್ದಾರೆ.

ಜುಲೈ 12ರಂದು ಅಮಾನತುಗೊಂಡಿರುವ ಸುರ್ಜೀತ್ ಛಡ್ಡಾ ಹಾಗೂ ಸದಾಶಿವ್ ಯಾದವ್ ಅವರನ್ನೊಳಗೊಂಡಂತೆ ಹಲವಾರು ಇಂದೋರ್ ಕಾಂಗ್ರೆಸ್ ನಾಯಕರು ವಿಜಯ್ ವರ್ಗೀಯ ಹಾಗೂ ಇನ್ನಿತರ ಬಿಜೆಪಿ ನಾಯಕರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸ್ವಾಗತಿಸಿದ್ದರು.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಇಂದೋರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಕ್ಷಯ್ ಬಾಮ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಲ್ಲಿ ವಿಜಯ್ ವರ್ಗೀಯ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಇದರಿಂದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಅಕ್ಷರಶಃ ಕಾಂಗ್ರೆಸ್ ಅಭ್ಯರ್ಥಿ ಇಲ್ಲದಂತಾಗಿತ್ತು.

ತಮ್ಮ ಅಮಾನತು ಕುರಿತು ಪ್ರತಿಕ್ರಿಯಿಸಿರುವ ಸುರ್ಜೀತ್ ಛಡ್ಡಾ, “ವಿಜಯ್ ವರ್ಗೀಯ ಅವರನ್ನು ರಾಜಕೀಯ ಸೌಜನ್ಯದ ಭಾಗವಾಗಿ ಪಕ್ಷದ ಕಚೇರಿಗೆ ಸ್ವಾಗತಿಸಲಾಗಿತ್ತು” ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News