ಮಹಾರಾಷ್ಟ್ರ: ವೀಡಿಯೊ ಮಾಡುತ್ತಿದ್ದಾಗ ಕಾಡಾನೆಯ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ ಅರಣ್ಯ ಸಿಬ್ಬಂದಿ
ಹೊಸದಿಲ್ಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ವೀಡಿಯೊ ಮಾಡುತ್ತಿದ್ದಾಗ ಕಾಡಾನೆಯೊಂದು ತುಳಿದು ಸಾಯಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ
ಸುಧಾಕರ್ ಬಿ. ಅತ್ರಾಮ್ ಅರಣ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು. ಪಾಲಸಗಾಂವ್ ಅರಣ್ಯಕ್ಕೆ ಕಾಡಾನೆಗಳು ನುಗ್ಗಿವೆ ಎಂದು ಗ್ರಾಮಸ್ಥರು ದೂರು ನೀಡಿದ ನಂತರ, ಅತ್ರಾಮ್ ಸೇರಿದಂತೆ ಅರಣ್ಯ ಇಲಾಖೆ ತಂಡವು ಸ್ಥಳಕ್ಕೆ ತಲುಪಿತು.
ತಂಡವು ಆನೆಯ ಹಿಂಡನ್ನು ಓಡಿಸುತ್ತಿದ್ದಾಗ, ಅತ್ರಮ್ ತನ್ನ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ವೀಡಿಯೊ ರೆಕಾರ್ಡ್ ಮಾಡಲು ಆರಂಭಿಸಿದರು. ಅಷ್ಟರಲ್ಲಿ ಆನೆಯೊಂದು ಅವರತ್ತ ಓಡಿಬಂತು. ಆಗ ಇತರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಅಟ್ರಾಮ್ ಎಡವಿ ಬಿದ್ದರು. ಆಗ ಕಾಡು ಆನೆ ಅವರನ್ನು ತುಳಿದು ಸಾಯಿಸಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಒಡಿಶಾದ ಆನೆಗಳು ಮಹಾರಾಷ್ಟ್ರಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿರುವ ನಡುವೆ ಈ ದುರಂತ ಘಟನೆ ನಡೆದಿದೆ