ಮಹಾರಾಷ್ಟ್ರ | ಮಕ್ಕಳ ಕಣ್ಣಿಗೆ ಬಿದ್ದ ಸೂಟ್ ಕೇಸ್ ನಲ್ಲಿ ಮಹಿಳೆಯ ರುಂಡ ಪತ್ತೆ!

ಸಾಂದರ್ಭಿಕ ಚಿತ್ರ
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕೆಲವು ಮಕ್ಕಳು ತಮ್ಮ ಕಣ್ಣಿಗೆ ಬಿದ್ದ ಸೂಟ್ ಕೇಸನ್ನು ಕುತೂಹಲದಿಂದ ತೆರೆದು ನೋಡಿದಾಗ, ಅದರಲ್ಲಿ ಮಹಿಳೆಯೊಬ್ಬರ ರುಂಡ ಪತ್ತೆಯಾಗಿದ್ದು, ತಕ್ಷಣವೇ ಈ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ ಎಂದು ಶುಕ್ರವಾರ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುರುವಾರ ಸಂಜೆ ವಿರಾರ್ ಪ್ರದೇಶದ ಪಿರ್ಕುಂದ ದರ್ಗಾ ಬಳಿ ಮಹಿಳೆಯೊಬ್ಬರ ರುಂಡ ಪತ್ತೆಯಾಗಿದೆ. ವಾರಸುದಾರರಿಲ್ಲದ ಸೂಟ್ ಕೇಸ್ ಒಂದು ಕೆಲವು ಸ್ಥಳೀಯ ಬಾಲಕರ ಕಣ್ಣಿಗೆ ಬಿದ್ದಿದ್ದು, ಅವರು ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಲಿದ್ದು, ಹತ್ಯೆ ಪ್ರಕರಣವನ್ನು ಭೇದಿಸಲು ತನಿಖೆ ಪ್ರಗತಿಯಲ್ಲಿದೆ ಎಂದು ಮಾಂಡ್ವಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.