ಮಹಾರಾಷ್ಟ್ರ: ಗರ್ಭಿಣಿ ಹತ್ಯೆ ಪ್ರಕರಣ; ಆರು ಜನರಿಗೆ ಜೀವಾವಧಿ ಶಿಕ್ಷೆ
ಜಾಲ್ನಾ: ಮೂರು ವರ್ಷಗಳ ಹಿಂದೆ ಆಸ್ತಿ ವಿವಾದ ಕುರಿತು ಮಹಾರಾಷ್ಟ್ರದ ಜಾಲ್ನಾ ನಗರದ ಕಾಜಿಪುರ ಪ್ರದೇಶದಲ್ಲಿ ಗರ್ಭಿಣಿಯ ಹತ್ಯೆಯನ್ನು ಮಾಡಿದ್ದಕ್ಕಾಗಿ ನಾಲ್ವರು ಮಹಿಳೆಯರು ಸೇರಿದಂತೆ ಆರು ಜನರಿಗೆ ಸ್ಥಳೀಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 1,000 ರೂ.ಗಳ ದಂಡವನ್ನು ವಿಧಿಸಿದೆ.
ಹಿನಾ ಖಾನ್ ಕೊಲೆಯಾದಾಗ ಆರು ತಿಂಗಳ ಗರ್ಭವತಿಯಾಗಿದ್ದಳು. ನಿಲೋಫರ್ ಜಾಫರ್ ಖಾನ್(23),ನಸೀಮಾ ಜಾಫರ್ ಖಾನ್(55), ಅರ್ಬಾಜ್ ಖಾನ್ ಜಾಫರ್ ಖಾನ್ (20),ಇಸ್ಮಾಯಿಲ್ ಅಹ್ಮದ್ ಶಾ (38),ಹಲೀಮಾಬಿ(60) ಮತ್ತು ಶಬಾನಾ ಶಾ (30) ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರೆಲ್ಲರೂ ಹೀನಾಳ ಮೊದಲ ಪತಿಯ ಸಂಬಂಧಿಗಳಾಗಿದ್ದು, ಆಕೆಯೊಂದಿಗೆ ಆಸ್ತಿ ವಿವಾದವನ್ನು ಹೊಂದಿದ್ದರು.
2020,ಆ.9ರಂದು ಹೀನಾಳ ಎರಡನೇ ಪತಿ ಸೈಯ್ಯದ್ ಮಜೀದ್ ತಾಂಬೋಳಿ ಮನೆಗೆ ಬಲವಂತದಿಂದ ನುಗ್ಗಿದ್ದ ಆರೋಪಿಗಳು ಆಕೆಯನ್ನು ಕಬ್ಬಿಣದ ಸರಳುಗಳಿಂದ ಥಳಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಹೀನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಪತ್ನಿಯ ರಕ್ಷಣೆಗೆ ಧಾವಿಸಿದ್ದ ತಾಂಬೋಳಿಗೂ ಗಾಯಗಳಾಗಿದ್ದವು.