ಮಹಾರಾಷ್ಟ್ರ: ಸಿಎಂ ಅಭ್ಯರ್ಥಿ ಘೋಷಿಸದೆ, ಮೋದಿ ಹೆಸರಿನಲ್ಲಿ ಚುನಾವಣೆ ಎದುರಿಸಲು ಮಹಾಯುತಿ ಮೈತ್ರಿಕೂಟ ನಿರ್ಧಾರ
ಮಹಾರಾಷ್ಟ್ರ: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಪ್ರಧಾನಿ ಮೋದಿ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡಲು ಮತ್ತು ಮೋದಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಅವರು ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದಾರೆ. ಮಹಾಯುತಿ ಮೈತ್ರಿಕೂಟವು, ಬಿಜೆಪಿ, ಶಿವಸೇನೆ, ಎನ್ಸಿಪಿಯ ಯಾವುದೇ ಪ್ರಮುಖ ನಾಯಕರನ್ನು ಅಥವಾ ಹಾಲಿ ಸಿಎಂ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದೆ.
ಪ್ರಧಾನಿ ಮೋದಿಯನ್ನು ಮುಂದಿಟ್ಟುಕೊಂಡು ಮಹಾಯುತಿ ಮೈತ್ರಿಕೂಟ ಈ ಬಾರಿ ಮಹಾರಾಷ್ಟ್ರದಲ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಚುನಾವಣೆಗೆ ಮೊದಲು ಅಥವಾ ನಂತರ ಮಹಾಯುತಿಯನ್ನು ಮುನ್ನಡೆಸಲಿರುವ ಮತ್ತು ಸಿಎಂ ಅಭ್ಯರ್ಥಿ ಬಗ್ಗೆ ಮಾಹಿತಿ ನೀಡಲು ಬಿಜೆಪಿ ನಿರಾಕರಿಸಿದೆ. ಮಹಾಯುತಿ ಮೈತ್ರಿಕೂಟವು ಎಲ್ಲಾ ಮೂರು ಪಕ್ಷಗಳ ನಾಯಕರ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗಳನ್ನು ಎದುರಿಸಲಿದೆ. ಆದರೆ ಬಿಜೆಪಿ ಅಥವಾ ಶಿವಸೇನೆ ಅಥವಾ ಎನ್ಸಿಪಿಯ ಯಾವುದೇ ನಾಯಕನನ್ನು ಸಿಎಂ ಅಭ್ಯರ್ಥಿಯೆಂದು ಚುನಾವಣಾ ಪೂರ್ವವಾಗಿ ಘೋಷಿಸುವುದಿಲ್ಲ ಎಂದು ಮೂಲಗಳು ತಿಳಿಸಿದೆ.
ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 155-160 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಶಿಂಧೆ ನೇತೃತ್ವದ ಶಿವಸೇನೆ 80-85 ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 50-55 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಹಾಲಿ ಸಿಎಂ ಏಕನಾಥ್ ಶಿಂಧೆ ತಮ್ಮನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಮಹಾಯುತಿ ಮೈತ್ರಿಕೂಟದ ನಾಯಕರಿಗೆ ಒತ್ತಾಯಿಸಿದ್ದರು, ಆದರೆ ಬಿಜೆಪಿ ನಾಯಕರು ಮತ್ತು ಅಜಿತ್ ಪವಾರ್ ಹಿಂಜರಿದಿದ್ದಾರೆ ಎನ್ನಲಾಗಿದೆ.