ಮಹುವಾ ಮೊಯಿತ್ರಾ ಉಚ್ಚಾಟನೆಯು ನ್ಯಾಯಾಂಗ ಪುನರ್‌ಪರಿಶೀಲನೆಯ ವ್ಯಾಪ್ತಿಗೆ ಮೀರಿದೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಲೋಕಸಭಾ ಸಚಿವಾಲಯ
ಹೊಸದಿಲ್ಲಿ: ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಯು ನ್ಯಾಯಾಂಗ ಪುನರ್‌ಪರಿಶೀಲನೆಯ ವ್ಯಾಪ್ತಿಗೊಳಪಡುವುದಿಲ್ಲ ಎಂದು ಲೋಕಸಭಾ ಸಚಿವಾಲಯವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಮೊಯಿತ್ರಾರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯಗಳು ನಡೆಸಲು ಸಾಧ್ಯವಿಲ್ಲ, ಹಾಗೆ ಮಾಡಿದರೆ ಸಂವಿಧಾನದ ಮೂಲಭೂತ ಲಕ್ಷಣವಾಗಿರುವ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರಗಳ ಪ್ರತ್ಯೇಕತೆಯ ಉಲ್ಲಂಘನೆಯಾಗುತ್ತದೆ ಎಂದು ಅದು ಬೆಟ್ಟು ಮಾಡಿದೆ.
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ದುಬೈನ ಉದ್ಯಮಿ ದರ್ಶನ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಪಡೆದಿದ್ದ ಮತ್ತು ಸಂಸದೀಯ ವೆಬ್‌ಸೈಟ್‌ನ ಲಾಗಿನ್ ವಿವರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಜ.8ರಂದು ಪ.ಬಂಗಾಳದ ಕೃಷ್ಣನಗರದ ಟಿಎಂಸಿ ಸಂಸದೆ ಮೊಯಿತ್ರಾರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿತ್ತು.
ಸಂವಿಧಾನದ ಸಾರ್ವಭೌಮ ಅಂಗವಾಗಿ ಸಂಸತ್ತು ಮೊಯಿತ್ರಾರ ಉಚ್ಚಾಟನೆ ನಿರ್ಧಾರವನ್ನು ತೆಗೆದುಕೊಂಡಿದೆ. ಆಂತರಿಕ ಪ್ರಕ್ರಿಯೆಗಳನ್ನು ಅನುಸರಿಸಲಾಗಿತ್ತು ಮತ್ತು ಸಂಸತ್ತಿನ ನಿರ್ಧಾರವನ್ನು ಅನುಪಾತದ ಸಿದ್ಧಾಂತದ ಆಧಾರದಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ ಎಂದು ಲೋಕಸಭಾ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಅನುಪಾತ ಸಿದ್ಧಾಂತವು ವ್ಯಕ್ತಿಯ ವಿರುದ್ಧ ಯಾವುದೇ ಆಡಳಿತಾತ್ಮಕ ಕ್ರಮ ಅಥವಾ ನಿರ್ಧಾರವು ಅವರ ಕೃತ್ಯಕ್ಕೆ ಅನುಗುಣವಾಗಿರಬೇಕು ಎಂಬ ಕಾನೂನು ತತ್ವವನ್ನು ಸೂಚಿಸುತ್ತದೆ.
ಸಂಸತ್ತಿನ ಆಂತರಿಕ ಕಾರ್ಯ ಮತ್ತು ಅಧಿಕಾರದಲ್ಲಿ ನ್ಯಾಯಾಂಗದ ಹಸ್ತಕ್ಷೇಪವನ್ನು ನಿರ್ಬಂಧಿಸಿರುವ ಸಂವಿಧಾನದ 122ನೇ ವಿಧಿಯನ್ನು ಲೋಕಸಭಾ ಸಚಿವಾಲಯವು ಪ್ರಸ್ತಾಪಿಸಿದೆ.
ಸದನದ ಕಲಾಪಗಳನ್ನು ನಿಯಂತ್ರಿಸಲು ಅಧಿಕಾರ ಹೊಂದಿರುವ ಸಂಸತ್ತಿನ ಸದಸ್ಯರು ತಮ್ಮ ಅಧಿಕಾರ ಚಲಾವಣೆಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದ ವ್ಯಾಪ್ತಿಗೊಳಪಡುವುದಿಲ್ಲ ಎಂದು ತಿಳಿಸಿರುವ ಅದು,ಸದನವು ತನ್ನ ಮುಂದಿರುವ ಕಲಾಪಗಳ ಕಾನೂನು ಬದ್ಧತೆಯ ಏಕೈಕ ತೀರ್ಪುಗಾರನಾಗಿದೆ ಮತ್ತು ಸಂಸತ್ತಿನ (ಮತ್ತು ಅದರ ಅಂಗಸಂಸ್ಥೆಗಳ) ಕಾರ್ಯಕಲಾಪಗಳನ್ನು ಪ್ರಶ್ನಿಸುವಂತಿಲ್ಲ ಎಂದು ಲೋಕಸಭಾ ಸಚಿವಾಲಯದ ಕಾರ್ಯದರ್ಶಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಸಂಸತ್ತಿಗೆ ಆಯ್ಕೆಯಾಗುವ ಮತ್ತು ಅಂತಹ ಸ್ಥಾನದಲ್ಲಿ ಮುಂದುವರಿಯುವ ವ್ಯಕ್ತಿಯ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂದೂ ಅದು ಹೇಳಿದೆ.
ಹೀಗಾಗಿ ಸಂವಿಧಾನದ 32ನೇ ವಿಧಿಯಡಿ ಮೊಯಿತ್ರಾ ಸಲ್ಲಿಸಿರುವ ಅರ್ಜಿಯು ಅಂಗೀಕಾರಾರ್ಹವಲ್ಲ ಎಂದು ಅಫಿಡವಿಟ್‌ನಲ್ಲಿ ಪ್ರತಿಪಾದಿಸಲಾಗಿದೆ.
ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಪೀಠವು ಮೇ 6ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.
ಬಿಜೆಪಿ ಸಂಸದ ನಿಶಿಕಾಂತ ದುಬೆ ಮತ್ತು ಮೊಯಿತ್ರಾರ ಪರಿತ್ಯಕ್ತ ಸಂಗಾತಿಯೆನ್ನಲಾದ ವಕೀಲ ಅನಂತ ದೇಹದ್ರಾಯ್ ಅವರು ಟಿಎಂಸಿ ಸಂಸದೆಯ ವಿರುದ್ಧ ಮೊದಲ ಆರೋಪಗಳನ್ನು ಮಾಡಿದ್ದರು.
ತನ್ನ ಉಚ್ಚಾಟನೆಯ ಬೆನ್ನಲ್ಲೇ ಮೊಯಿತ್ರಾ ಸಂವಿಧಾನದ ವಿಧಿ 32ರಡಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಿಧಿಯು ಯಾವುದೇ ವ್ಯಕ್ತಿಯು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸುವ ಹಕ್ಕನ್ನು ಖಾತರಿಪಡಿಸಿದೆ.