ಬಿಜೆಪಿ ಸಂಸದ ನಿಶಿಕಾಂತ್ ದುಬೆಗೆ ಕಾನೂನು ನೋಟಿಸ್ ಜಾರಿಗೊಳಿಸಿದ ಮಹುವಾ ಮೊಯಿತ್ರಾ
ಹೊಸದಿಲ್ಲಿ: ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿ ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹಾಗೂ ವಕೀಲ ಜೈ ಅನಂತ್ ದೇಹಾದ್ರೈ ಅವರಿಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು thewire.in ವರದಿ ಮಾಡಿದೆ.
ರವಿವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅದಾನಿ ಸಮೂಹದ ಕುರಿತು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಯಿತ್ರಾ ನಗದು ಹಾಗೂ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದರು. ಈ ಮಾಹಿತಿಯನ್ನು ನಾನು ದೇಹಾದ್ರೈ ಅವರಿಂದ ಪಡೆದಿದ್ದೇನೆ ಎಂದು ಅವರು ಆ ಪತ್ರದಲ್ಲಿ ಪ್ರತಿಪಾದಿಸಿದ್ದರು.
ಅದಾನಿ ಸಮೂಹದ ಕುರಿತು ಮಹುವಾ ಮೊಯಿತ್ರಾ ಹಾಗೂ ಇತರ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಎತ್ತಿದ್ದ ಪ್ರಶ್ನೆಗಳ ಕುರಿತು ಕೇಂದ್ರ ಸರ್ಕಾರವು ಉತ್ತರ ನೀಡಿರಲಿಲ್ಲ.
ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ಬರೆದಿದ್ದ ಪತ್ರದ ಕುರಿತು ವರದಿ ಮಾಡಿದ್ದ The Wire ಸುದ್ದಿ ಸಂಸ್ಥೆ ಸೇರಿದಂತೆ 18 ಮಾಧ್ಯಮ ಸಂಸ್ಥೆಗಳಿಗೂ ಮಹುವಾ ಮೊಯಿತ್ರಾ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
ಇತ್ತೀಚೆಗೆ ಮಹುವಾ ಮೊಯಿತ್ರಾ ಅವರು ನಿಶಿಕಾಂತ್ ದುಬೆ ಪ್ರತಿಪಾದಿಸಿಕೊಂಡಿರುವ ತಮ್ಮ ವಿದ್ಯಾರ್ಹತೆಯ ಕುರಿತು ಪ್ರಶ್ನೆಯೆತ್ತಿದ್ದರು ಹಾಗೂ ಅವರು ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು ಎಂಬುದನ್ನು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ವಿಚಲಿತರಾಗಿರುವ ದುಬೆ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆ ನೋಟಿಸ್ ನಲ್ಲಿ ದೂರಲಾಗಿದೆ.
ನಿಶಿಕಾಂತ್ ದುಬೆ ಅವರು ಲೋಕಸಭಾ ಸ್ಪೀಕರ್ ಗೆ ಬರೆದಿರುವ ಪತ್ರ ಹಾಗೂ ಮಾಡಿರುವ ಆರೋಪಗಳನ್ನು ಹಿಂಪಡೆಯಬೇಕು ಹಾಗೂ ಮಹುವಾ ಮೊಯಿತ್ರಾ ಅವರ ಕ್ಷಮೆ ಕೋರಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಬೇಕು. ಹಾಗೆಯೇ ವಕೀಲ ದೇಹಾದ್ರೈ ಕೂಡಾ ತಮ್ಮ ಎಲ್ಲ ಆರೋಪಗಳನ್ನು ಹಿಂಪಡೆಯಬೇಕು ಹಾಗೂ ಕ್ಷಮೆಯ ಹೇಳಿಕೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.