ಭಾರತದಲ್ಲಿ ಸಂಪೂರ್ಣ ಧೂಮಪಾನರಹಿತ ಸಾರ್ವಜನಿಕ ಸ್ಥಳಗಳಿಗೆ ಬಹುತೇಕರ ಬೆಂಬಲ : ಸಮೀಕ್ಷೆ

Update: 2024-10-24 13:45 GMT

PC : Meta AI

ಹೊಸದಿಲ್ಲಿ: ಭಾರತದಲ್ಲಿ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣವಾಗಿ ಧೂಮಪಾನ ಮುಕ್ತಗೊಳಿಸಬೇಕು ಎಂದು ಸುಮಾರು ಶೇ. 93ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದು, ರೈಲ್ವೆ ನಿಲ್ದಾಣಗಳಂತೆ ವಿಮಾನ ನಿಲ್ದಾಣಗಳನ್ನೂ ಸಂಪೂರ್ಣ ಧೂಮಪಾನ ರಹಿತ ಸ್ಥಳಗಳನ್ನಾಗಿ ಘೋಷಿಸಬೇಕು ಎಂದು ಶೇ. 97ರಷ್ಟು ಮಂದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ಬಹಿರಂಗಪಡಿಸಿದೆ.

ನಾಗರಿಕರ ನೇತೃತ್ವದ ‘ತಂಬಾಕು ಮುಕ್ತ ಭಾರತ’ ಉಪಕ್ರಮವು ಹಮ್ಮಿಕೊಂಡಿದ್ದ ಇತ್ತೀಚಿನ ಸಮೀಕ್ಷೆಯಲ್ಲಿ 65,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಅವರಲ್ಲಿ ಬಹುತೇಕರು ಪ್ಯಾಸಿವ್ ಧೂಮಪಾನದ ಹಾನಿಕಾರಕ ಪರಿಣಾಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ. 92.72ರಷ್ಟು ದೊಡ್ಡ ಸಂಖ್ಯೆಯ ಜನರು ಸಾರ್ವಜನಿಕ ಸ್ಥಳಗಳನ್ನು ಧೂಮಪಾನ ಮುಕ್ತ ಸ್ಥಳಗಳನ್ನಾಗಿ ಪರಿವರ್ತಿಸುವುದರ ಪರವಾಗಿದ್ದಾರೆ ಎಂಬ ಸಂಗತಿ ಸಮೀಕ್ಷೆಯಲ್ಲಿ ಬಯಲಾಗಿದೆ.

ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಲ್ಲೂ ನಡೆದಿರುವ ಈ ಸಮೀಕ್ಷೆಯು ಧೂಮಪಾನ ಮುಕ್ತ ಸಾರ್ವಜನಿಕ ಸ್ಥಳಗಳು ಹಾಗೂ ಪ್ಯಾಸಿವ್ ಧೂಮಪಾನ ಹೊಂದಿರುವ ಆರೋಗ್ಯ ಸಂಬಂಧಿ ಅಪಾಯಗಳ ಬಗ್ಗೆ ಆರು ಮುಖ್ಯ ಪ್ರಶ್ನೆಗಳನ್ನು ಹೊಂದಿತ್ತು. ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಹಾಗೂ ವಿಮಾನ ನಿಲ್ದಾಣಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ವಿಷಕಾರಿ ತಂಬಾಕು ಹೊಗೆಗೆ ಒಡ್ಡಿಕೊಳ್ಳುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಇನ್ನಿತರ ದುರ್ಬಲ ವರ್ಗಗಳ ಜನರನ್ನು ರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದನ್ನು ಬಹುತೇಕರು ಬೆಂಬಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಧಿವಾತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಉಮಾ ಕುಮಾರ್, “ಸಿಗರೇಟುಗಳು ಮತ್ತು ಇನ್ನಿತರ ತಂಬಾಕು ಉತ್ಪನ್ನಗಳ ಕಾಯ್ದೆ, 2023 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಿದ್ದರೂ, ವಿಮಾನ ನಿಲ್ದಾಣಗಳು, 30 ಅಥವಾ ಅದಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಗಳು ಹಾಗೂ 30ಕ್ಕಿಂತ ಹೆಚ್ಚು ಆಸನ ಸೌಲಭ್ಯ ಹೊಂದಿರುವ ರೆಸ್ಟೋರೆಂಟ್ ಗಳಲ್ಲಿ ಮೀಸಲು ಧೂಮಪಾನ ಸ್ಥಳಕ್ಕೆ ಅವಕಾಶ ಒದಗಿಸುತ್ತದೆ” ಎಂದು ಹೇಳಿದ್ದಾರೆ.

“ಈ ಪರಿಸ್ಥಿತಿಯು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಈ ಮೀಸಲು ಸ್ಥಳಗಳಲ್ಲಿ ಉಂಟಾಗುವ ಪ್ಯಾಸಿವ್ ಧೂಮಪಾನದಿಂದ ಹಾನಿಕಾರಕ ವಿಷಗಳಿಗೆ ಒಡ್ಡಿಕೊಳ್ಳುವ ಧೂಮಪಾನಿಗಳಲ್ಲದವರು ವಿವಿಧ ರೋಗಗಳಿಗೆ ತುತ್ತಾಗುವ ಅಪಾಯ ಹೆಚ್ಚಿದೆ ಎಂಬುದನ್ನು ವೈಜ್ಞಾನಿಕ ಸಾಕ್ಷಿಗಳು ನಿಸ್ಸಂದಿಗ್ಧವಾಗಿ ಸಾಬೀತುಪಡಿಸಿವೆ” ಎಂದು ಅವರು ಹೇಳುತ್ತಾರೆ.

ಈ ಸಮೀಕ್ಷೆಯನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅಕ್ಟೋಬರ್ 2ರಿಂದ ಅಕ್ಟೋಬರ್ 19ರವರೆಗೆ ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ ಒಟ್ಟು 65,272 ಮಂದಿ ಪಾಲ್ಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News