ಐಎಎಫ್ ವಿಮಾನ ಅಪಘಾತ | ಕಾಣೆಯಾಗಿದ್ದ ಯೋಧನ ಶವ 56 ವರ್ಷಗಳ ನಂತರ ಪತ್ತೆ, ಮರುಕಳಿಸಿದ ನೆನಪುಗಳು

Update: 2024-10-01 09:42 GMT

Photo : onmanorama.com

ಪಟ್ಟಣಂತಿಟ್ಟ(ಕೇರಳ) : ಹಿಮದಲ್ಲಿ ಹುಗಿದಿದ್ದ ನೆನಪುಗಳು 56 ವರ್ಷಗಳ ಬಳಿಕ ಮರುಕಳಿಸಿದಾಗ ಎಳಂತೂರು ಪೂರ್ವ ಓಡಲ್‌ನಲ್ಲಿಯ ಮನೆಯಲ್ಲಿ ಸಂತೋಷ ಮತ್ತು ದುಃಖ ಎರಡೂ ತುಂಬಿಕೊಂಡಿವೆ. ಮನೆಯ ಮಗ,ಯೋಧ ಥಾಮಸ್ ಚೆರಿಯನ್ ವಿಮಾನ ಅಪಘಾತದಲ್ಲಿ ನಾಪತ್ತೆಯಾದ ಐದು ದಶಕಗಳ ಬಳಿಕ ಅವರ ಪಾರ್ಥಿವ ಶರೀರ ಸೋಮವಾರ ಪತ್ತೆಯಾಗಿದೆ.

‘ನನಗೆ ಎಂಟು ವರ್ಷ ವಯಸ್ಸಾಗಿದ್ದಾಗ ನನ್ನ ಅಣ್ಣ ಸೇನೆಗೆ ಸೇರಿದ್ದರು. ಮೂರು ಸಲ ಅವರು ಮನೆಗೆ ಭೇಟಿ ನೀಡಿದ್ದರು. ಅವರು ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿದೆ ಎಂದು ನಮಗೆ ಮಾಹಿತಿ ನೀಡಲಾಗಿತ್ತು. ವಿಮಾನ ಪತನಗೊಂಡಿದ್ದನ್ನು 2003ರಲ್ಲಿ ದೃಢಪಡಿಸಲಾಗಿತ್ತು. ನನ್ನ ತಂದೆ ನಿಧನರಾಗಿ 35 ವರ್ಷಗಳು ಮತ್ತು ತಾಯಿ ನಿಧನರಾಗಿ 28 ವರ್ಷಗಳು ಕಳೆದಿವೆ. ನನ್ನ ಅಣ್ಣ ನಾಪತ್ತೆಯಾದ ಬಳಿಕ ನನ್ನ ತಾಯಿ ಅವರನ್ನು ನೆನಪಿಸಿಕೊಂಡು ಯಾವಾಗಲೂ ಅಳುತ್ತಿದ್ದರು’ ಎಂದು ಚೆರಿಯನ್ ಸೋದರ ಥಾಮಸ್ ವರ್ಗೀಸ್ ನೆನಪಿನ ಬುತ್ತಿಯನ್ನು ಬಿಚ್ಚಿದರು.

‘ಅರನ್ಮುಲ್ಲಾ ಪೋಲೀಸರು ನಿನ್ನೆ ಸಂಜೆ ಏಳು ಗಂಟೆಗೆ ನಮ್ಮ ಮನೆಗೆ ಭೇಟಿ ನೀಡಿ ವಿಳಾಸ ಪಡೆದುಕೊಂಡಿದ್ದಾರೆ. ಆಗಲೇ ನಮಗೆ ಥಾಮಸ್ ಪಾರ್ಥಿವ ಶರೀರ ಪತ್ತೆಯಾಗಿದೆ ಎನ್ನುವುದು ಗೊತ್ತಾಗಿದ್ದು. ಬಳಿಕ ಸೇನೆಯಿಂದ ನಮಗೆ ಸೂಚನೆ ಲಭಿಸಿದೆ. ನನ್ನ ಅಣ್ಣ ವಾಪಸ್ ಬರುತ್ತಾರೆ ಎಂದು ನಾನು ಆಶಿಸಿದ್ದೆ,ಆದರೆ ವಿಮಾನ ಅಪಘಾತ ದೃಢಪಟ್ಟ ಬಳಿಕ ಎಲ್ಲ ಭರವಸೆಯೂ ಮಾಯವಾಗಿತ್ತು’ ಎಂದರು.

ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್‌ನಲ್ಲಿ ಭಾರತೀಯ ವಾಯುಪಡೆಯ ಎಎನ್-12 ವಿಮಾನ ಪತನಗೊಂಡಾಗ ಚೆರಿಯನ್‌ಗೆ ಕೇವಲ 22 ವರ್ಷ ವಯಸ್ಸಾಗಿತ್ತು. ಚಂಡಿಗಡದಿಂದ ಲೇಹ್‌ಗೆ 120 ಜನರನ್ನು ಸಾಗಿಸುತ್ತಿದ್ದ ಎರಡು ಇಂಜಿನ್‌ಗಳ ಟರ್ಬೊಪ್ರೊಪ್ ಸಾರಿಗೆ ವಿಮಾನವು 1968, ಫೆ.7ರಿಂದ ನಾಪತ್ತೆಯಾಗಿತ್ತು. ಈವರೆಗೆ ಒಂಭತ್ತು ಶವಗಳು ಪತ್ತೆಯಾಗಿದ್ದವು. ಸೋಮವಾರ ಸೇನಾ ಕಾರ್ಯಾಚರಣೆಯಲ್ಲಿ ಚೆರಿಯನ್ ಸೇರಿದಂತೆ ಇನ್ನೂ ಮೂವರ ಶವಗಳು ಪತ್ತೆಯಾಗಿವೆ.

ಚೆರಿಯನ್ ಗೆ ನಾಲ್ವರು ಒಡಹುಟ್ಟಿದವರಿದ್ದರು. ಅವರ ಹಿರಿಯ ಸೋದರ ದಿ.ಥಾಮಸ್ ಮ್ಯಾಥ್ಯೂ ಕೂಡ ಯೋಧರಾಗಿದ್ದರು. ಉತ್ತರ ಭಾರತದಲ್ಲಿ ಉದ್ಯೋಗದಲ್ಲಿದ್ದ ಥಾಮಸ್ ಥಾಮಸ್ ಈಗ ಎಳಂತೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಥಾಮಸ್ ವರ್ಗೀಸ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮೇರಿ ಇವರೆಲ್ಲರ ಏಕೈಕ ಸೋದರಿ. ಚೆರಿಯನ್ ಬದುಕಿದ್ದರೆ ಅವರಿಗೆ ಈಗ 78 ವರ್ಷ ವಯಸ್ಸಾಗಿರುತ್ತಿತ್ತು.

‘ನಮ್ಮ ಬಳಿ ಚೆರಿಯನ್ ಫೋಟೊ ಕೂಡ ಇಲ್ಲ,ನಮ್ಮ ಕುಟುಂಬದ ಮನೆಯನ್ನು ನೆಲಸಮಗೊಳಿಸಿದಾಗ ಇದ್ದ ಫೋಟೊ ಕೂಡ ಕಳೆದಿತ್ತು ’ ಎಂದು ಥಾಮಸ್ ಥಾಮಸ್ ಹೇಳಿದರು.

ಚೆರಿಯನ್ ಸೇನೆಗೆ ಸೇರುವಾಗ 12 ವರ್ಷದವರಾಗಿದ್ದ ಮೇರಿ ಮನೆಗೆ ತನ್ನ ಅಣ್ಣನ ಎಲ್ಲ ಭೇಟಿಗಳನ್ನು ನೆನಪಿಸಿಕೊಂಡರು. ‘ವಿಮಾನ ಅಪಘಾತದ ಸುದ್ದಿ ಕೇಳಿದ ಬಳಿಕ ನನ್ನ ತಾಯಿ ಕೆಲ ಸಮಯ ಹಾಸಿಗೆ ಹಿಡಿದಿದ್ದರು, ಅವರು ತುಂಬ ದುಃಖಿತರಾಗಿದ್ದರು’ ಎಂದು ಮೇರಿ ಹೇಳಿದರು.

ಅಗತ್ಯ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಸೇನೆಯು ಚೆರಿಯನ್ ಅವರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಿದೆ.

ಸೌಜನ್ಯ :  onmanorama.com

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News