ಇಸ್ರೋದಿಂದ ಬಾಹ್ಯಾಕಾಶ ಡಾಕಿಂಗ್ ಉಪಗ್ರಹಗಳ ಉಡಾವಣೆ

Update: 2024-12-31 03:18 GMT

PC: x.com/isro

ಶ್ರೀಹರಿಕೋಟಾ: ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳು ಸಂಧಿಸಲು ಅವಕಾಶ ಮಾಡಿಕೊಡುವ ಸ್ಪೇಸ್ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿದ ವಿಶ್ವದ ಬೆರಳೆಣಿಕೆಯ ದೇಶಗಳ ಸಾಲಿಗೆ ಸೇರಲು ಭಾರತ ಮತ್ತಷ್ಟು ಸನಿಹವಾಗಿದೆ. ಸೋಮವಾರ ಈ ಸಂಬಂಧ ತಲಾ 220 ಕೆ.ಜಿ. ತೂಕದ ಸಣ್ಣ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಸ್ಪೇಸ್ ಡಾಕಿಂಗ್ ಎಕ್ಸ್ಪರಿಮೆಂಟ್ ಮಿಷನ್ ಭಾಗವಾಗಿರುವ ಎರಡು ಉಪಗ್ರಹಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ಪಿಎಸ್ಎಲ್ ವಿ-ಸಿ60 ವಾಹಕದ ಮೂಲಕ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಯಿತು. 15 ನಿಮಿಷ ಬಳಿಕ ಇವುಗಳನ್ನು 475 ಕಿಲೋಮೀಟರ್ ಕಕ್ಷೆಯಲ್ಲಿ ಇರಿಸಲಾಗಿದೆ. ಈ ಉಪಗ್ರಹಗಳ ಪೈಕಿ ಮೊದಲನೆಯದನ್ನು 15.1 ನಿಮಿಷ ಬಳಿಕ ಹಾಗೂ ಮತ್ತೊಂದನ್ನು 15.2 ನಿಮಿಷಗಳ ಬಳಿಕ ವಾಹಕದಿಂದ ಪ್ರತ್ಯೇಕಿಸಲಾಗಿದೆ.

ಚೇಸರ್ ಮತ್ತು ಟಾರ್ಗೆಟ್ ಎಂಬ ಉಪಗ್ರಹಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಯು.ಆರ್ ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ.ಶಂಕರನ್ ಹೇಳಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಕೆಲ ರೂಪಾಂತರಗಳ ಬಳಿಕ ಇವುಗಳನ್ನು ಪರಸ್ಪರ ದೂರ ಮಾಡಲಿದ್ದು, ನಂತರ ಅವುಗಳನ್ನು ಸಂಧಿಸುವ ಪ್ರಯತ್ನ ಮಾಡಲಿದೆ. ಯಶಸ್ವಿಯಾಗಿ ಇದನ್ನು ಮಾಡಲು ಸಾಧ್ಯವಾದಲ್ಲಿ, ಭಾರತ ಈ ಮಾಸ್ಟರಿಂಗ್ ತಂತ್ರಜ್ಞಾನವನ್ನು ಹೊಂದಿದ ಅಮೆರಿಕ, ರಷ್ಯ ಮತ್ತು ಚೀನಾದ ಸಾಲಿಗೆ ಸೇರಲಿದೆ.

"ರಾಕೆಟ್ ಈ ಉಪಗ್ರಹಗಳನ್ನು ಸರಿಯಾದ ಕಕ್ಷೆಯಲ್ಲಿ ಇರಿಸಿದೆ. ಉಪಗ್ರಹಗಳು ಒಂದರ ಹಿಂದೆ ಚಲಿಸುತ್ತಿವೆ. ಮುಂದಿನ ಕೆಲ ದಿನಗಳಲ್ಲಿ ಇವುಗಳ ನಡುವಿನ ಅಂತರ 20 ಕಿಲೋಮೀಟರ್ ಆಗಲಿದ್ದು, ಡಾಕಿಂಗ್ ಮೂಲಕ ಇವುಗಳನ್ನು ಹತ್ತಿರಕ್ಕೆ ತರುವ ಪ್ರಯತ್ನ ಮಾಡಲಾಗುತ್ತದೆ. ಮುಂದಿನ ವಾರ ಇದನ್ನು ಪೂರ್ಣಗೊಳಿಸುವ ಭರವಸೆ ಇದೆ. ಬಹುಶಃ ಜನವರಿ 7ರಂದು ಇದು ಸಾಧ್ಯವಾಗಬಹುದು" ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News