ಮಣಿಪುರ | ಕಾಣೆಯಾಗಿರುವ ವ್ಯಕ್ತಿಯ ನಿವಾಸದ ಮುಂದೆ ಗ್ರೆನೇಡ್ ಪತ್ತೆ
ಇಂಫಾಲ: ನವೆಂಬರ್ ತಿಂಗಳಲ್ಲಿ ಲೈಮಾಖೋಂಗ್ ಸೇನಾ ನಿಲ್ದಾಣದಿಂದ ನಾಪತ್ತೆಯಾಗಿದ್ದ ಲೈಶಾರಾಮ್ ಕಮಲ್ಬದು ಸಿಂಗ್ ನಿವಾಸದೆದುರು ಗುರುವಾರ ಗ್ರೆನೇಡ್ ಪತ್ತೆಯಾಗಿದ್ದು, ಇದರಿಂದ ಈ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೈಬಾಂಬ್ ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿರುವ ಲೊಯ್ತಾಂಗ್ ಖುನೌನಲ್ಲಿರುವ ಲೈಶಾರಾಮ್ ಕಮಲ್ಬದು ಸಿಂಗ್ ನಿವಾಸದ ಗೇಟ್ ಬಳಿ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಗ್ರೆನೇಡ್ ವಶಪಡಿಸಿಕೊಂಡಿದ್ದು, ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.
ನಾಪತ್ತೆಯಾಗಿರುವ ವ್ಯಕ್ತಿಯ ಸಂಬಂಧ ರಚಿಸಲಾಗಿರುವ ಜಂಟಿ ಕ್ರಿಯಾ ಸಮಿತಿಯನ್ನು ವಿಸರ್ಜಿಸಬೇಕು ಹಾಗೂ ನೂತನ ಜಂಟಿ ಕ್ರಿಯಾ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿರುವ ಟಿಪ್ಪಣಿಯೊಂದೂ ಕೈಬಾಂಬ್ ನೊಂದಿಗೆ ಪತ್ತೆಯಾಗಿದೆ.
“ಭೂಮಿಯನ್ನು ಮಾರಾಟ ಮಾಡುವ ಯಾವ ಗುತ್ತಿಗೆದಾರನೂ ಜಂಟಿ ಕ್ರಿಯಾ ಸಮಿತಿಯ ಭಾಗವಾಗಿರಬಾರದು” ಎಂದೂ ಟಿಪ್ಪಣಿಯಲ್ಲಿ ಆಗ್ರಹಿಸಲಾಗಿದೆ. ನವೆಂಬರ್ 25ರಂದು ಲೈಶಾರಾಮ್ ಕಮಲ್ಬದು ಸಿಂಗ್ ನಾಪತ್ತೆಯಾದಂದಿನಿಂದ ನಡೆಯುತ್ತಿರುವ ಪ್ರತಿಭಟನೆಗಳ ನೇತೃತ್ವವನ್ನು ಜಂಟಿ ಕ್ರಿಯಾ ಸಮಿತಿ ವಹಿಸಿದೆ.
ಲೈಶಾರಾಮ್ ಕಮಲ್ಬದು ಸಿಂಗ್ ಸೇನಾ ನಿಲ್ದಾಣದಿಂದ ನಾಪತ್ತೆಯಾಗಿದ್ದು, ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ಕಳೆದ ವಾರ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಪ್ರಕಟಿಸಿದ್ದರು.
ಸೇನೆಯ ಪ್ರಕಾರ, ಲೈಶಾರಾಮ್ ಕಮಲ್ಬದು ಸಿಂಗ್ ಅಸ್ಸಾಂನ ಕಚರ್ ಜಿಲ್ಲೆಯ ನಿವಾಸಿಯಾಗಿದ್ದು, 57ನೇ ಕಣಿವೆ ವಿಭಾಗದ ಲೈಮಾಖೋಂಗ್ ಸೇನಾ ನಿಲ್ದಾಣದಲ್ಲಿನ ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್ ನೊಂದಿಗೆ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರೊಬ್ಬರ ಮೇಲ್ವಿಚಾರಕರಾಗಿದ್ದರು ಎಂದು ಹೇಳಲಾಗಿದೆ.