ಉತ್ತರ ಪ್ರದೇಶ | ಮಾಜಿ ಜಿಲ್ಲಾಧಿಕಾರಿ, ಪೊಲೀಸ್ ಸಿಬ್ಬಂದಿ ಸಹಿತ 26 ಮಂದಿ ವಿರುದ್ಧ ಪ್ರಕರಣ ದಾಖಲು

Update: 2025-01-02 17:00 GMT

ಸಾಂದರ್ಭಿಕ ಚಿತ್ರ | PTI 

ಮಹಾರಾಜ್‌ಗಂಜ್ : 2019ರಲ್ಲಿ ಪೂರ್ವಭಾವಿ ನೋಟಿಸ್ ನೀಡದೆ ಪತ್ರಕರ್ತ ಮನೋಜ್ ತಿಬ್ರೇವಾಲ್ ಆಕಾಶ್ ಅವರ ಮನೆಯನ್ನು ಕಾನೂನು ಬಾಹಿರವಾಗಿ ನೆಲಸಮಗೊಳಿಸಿದ ಆರೋಪದ ಕುರಿತಂತೆ ಮಹಾರಾಜ್‌ ಗಂಜ್‌ನ ಮಾಜಿ ಜಿಲ್ಲಾಧಿಕಾರಿ ಹಾಗೂ ಹಲವು ಆಡಳಿತ, ಪೊಲೀಸ್ ಸಿಬ್ಬಂದಿ ಸೇರಿದಂತೆ 26 ಮಂದಿಯ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.

‘‘ಉದ್ದೇಶಪೂರ್ವಕ’’ ಕಾನೂನಿಗೆ ಅವಿಧೇಯತೆ, ‘‘ಹಾನಿ ಉಂಟು ಮಾಡುವ ಉದ್ದೇಶ’’ದಿಂದ ತಪ್ಪಾದ ದಾಖಲೆಗಳ ಸೃಷ್ಟಿ ಹಾಗೂ ಇತರ ಆರೋಪಗಳ ಅಡಿಯಲ್ಲಿ ಸರಕಾರಿ ಅಧಿಕಾರಿಗಳು, ಗುತ್ತಿದಾರರ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

2019ರಲ್ಲಿ ‘‘ಅಕ್ರಮ’’ ಕಟ್ಟಡ ನೆಲಸಮಗೊಳಿಸಿರುವುದಕ್ಕೆ ಸುಪ್ರೀಂ ಕೋರ್ಟ್ ನವೆಂಬರ್ 6ರಂದು ಉತ್ತರಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಸಂದರ್ಭ ರಸ್ತೆ ವಿಸ್ತರಣೆ ಹಾಗೂ ಭೂಸ್ವಾಧೀನ ತೆರವು ಸಂದರ್ಭ ಕಾರ್ಯ ವಿಧಾನವನ್ನು ಅನುಸರಿಸುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು.

ಆಗಿನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ್, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ 2019ರಲ್ಲಿ ರಸ್ತೆ ವಿಸ್ತರಣೆ ಯೋಜನೆ ಸಂದರ್ಭ ತನ್ನ ಮನೆ ಕಳೆದುಕೊಂಡ ದೂರುದಾರ, ಪತ್ರಕರ್ತ ಮನೋಜ್ ತಿಬ್ರೆವಾಲ್ ಆಕಾಶ್ ಅವರಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ನಿರ್ದೇಶಿಸಿತ್ತು.

ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ತೀರ್ಪನ್ನು ಅನುಸರಿಸಿರುವ ಬಗ್ಗೆ ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ ಎಂದು ದೂರುದಾರ, ಪತ್ರಕರ್ತ ಮನೋಜ್ ತಿಬ್ರೇವಾಲ್ ಆಕಾಶ್ ಅವರು ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News