ನರ್ಸ್ ನಿಮಿಷಾ ಪ್ರಿಯಾ ಪ್ರಕರಣ | ಕ್ಷಮೆಯ ಭರವಸೆಯನ್ನು ಈಗಲೂ ಹೊಂದಿರುವ ಬಂಧುಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು
ತಿರುವನಂತಪುರ : ಯೆಮೆನ್‌ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಕೊನೆಯ ಕ್ಷಣದಲ್ಲಿ ಕ್ಷಮೆ ದೊರೆಯುವ ಬಗ್ಗೆ ಕೇರಳದಲ್ಲಿಯ ಅವರ ಬಂಧುಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ಈಗಲೂ ಭರವಸೆಯನ್ನು ಹೊಂದಿದ್ದಾರೆ.
ಯೆಮೆನಿ ಪ್ರಜೆ ತಲಾಲ್ ಅಬ್ದೊ ಮಹ್ದಿ ಕೊಲೆಗಾಗಿ ಅಲ್ಲಿಯ ನ್ಯಾಯಾಲಯವು ಪ್ರಿಯಾಗೆ ವಿಧಿಸಿರುವ ಮರಣ ದಂಡನೆಯನ್ನು ದೇಶದ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ದೃಢಪಡಿಸಿದ್ದಾರೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ನಿವಾಸಿ ಪ್ರಿಯಾ 2017ರಿಂದಲೂ ಯೆಮೆನ್ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
‘‘ಕೊಲೆಯಾಗಿರುವ ಮಹ್ದಿಯ ಕುಟುಂಬವು ‘ಪರಿಹಾರ ಹಣ’ವನ್ನು ಸ್ವೀಕರಿಸಲು ಒಪ್ಪಿಕೊಂಡು ಪ್ರಿಯಾರನ್ನು ಕ್ಷಮಿಸಿದರೆ ಆಕೆಯ ಜೀವ ಉಳಿಯಬಹುದು. ನಾವು ಈ ಬಗ್ಗೆ ಭರವಸೆಯನ್ನು ಹೊಂದಿದ್ದೇವೆ.ಆದರೆ ಕೇಂದ್ರದ ತುರ್ತು ಬೆಂಬಲವು ನಿರ್ಣಾಯಕವಾಗಿದೆ. ಅಗತ್ಯ ಹಣವನ್ನು ಪಾವತಿಸಲು ನಾವು ಸಿದ್ಧರಿದ್ದೇವೆ’’ ಎಂದು ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್‌ನ ಸದಸ್ಯ ಬಾಬು ಜಾನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಭಾರತ ಮತ್ತು ಅಂತರ್ಯುದ್ಧ ಪೀಡಿತ ಯೆಮೆನ್ ನಡುವೆ ದ್ವಿಪಕ್ಷೀಯ ಸಂಬಂಧಗಳ ಕೊರತೆಗಳ ಹೊರತಾಗಿಯೂ ನಮ್ಮ ರಾಜತಾಂತ್ರಿಕ ಪ್ರಯತ್ನಗಳು ಈಗಲೂ ಸಕಾರಾತ್ಮಕ ಫಲಿತಾಂಶವನ್ನು ನೀಡಬಹುದು’ ಎಂಬ ಆಶಯವನ್ನು ಜಾನ್ ವ್ಯಕ್ತಪಡಿಸಿದರು.