3 ಕೃಷಿ ಕಾನೂನುಗಳನ್ನು ಹಿಂಬಾಗಿಲ ಮೂಲಕ ಅನುಷ್ಠಾನಕ್ಕೆ ತರಲು ಕೇಂದ್ರ ಯತ್ನ : ಕೇಜ್ರಿವಾಲ್ ಆರೋಪ

Update: 2025-01-02 16:21 GMT

 ಅರವಿಂದ ಕೇಜ್ರಿವಾಲ್ | PTI 

ಹೊಸದಿಲ್ಲಿ : ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಏನಾದರೂ ಆದರೆ ಅದಕ್ಕೆ ಬಿಜೆಪಿಯೇ ಜವಾಬ್ದಾರಿಯಾಗಿರುತ್ತದೆ ಎಂದು ಆಮ್ ಆದ್ಮಿ ಪಕ್ಷ (ಆಪ್)ದ ಸಂಚಾಲಕ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆ (ಎಮ್‌ಎಸ್‌ಪಿ)ಗೆ ಕಾನೂನು ಖಾತರಿ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೈತ ನಾಯಕ ಜಗ್ಜೀತ್ ಸಿಂಗ್ ದಲ್ಲೇವಾಲ್ ಒಂದು ತಿಂಗಳಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ ಮತ್ತು ಅವರು ವೈದ್ಯಕೀಯ ನೆರವನ್ನು ನಿರಾಕರಿಸಿದ್ದಾರೆ.

ಕೇಂದ್ರ ಸರಕಾರವು ಈಗ ರದ್ದುಪಡಿಸಿರುವ ಮೂರು ಕೃಷಿ ಕಾನೂನುಗಳನ್ನು ‘‘ನೀತಿ’’ಯ ಹೆಸರಿನಲ್ಲಿ ಹಿಂಬಾಗಿಲಿನ ಮೂಲಕ ತರಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಕೇಜ್ರಿವಾಲ್ ಆರೋಪಿಸಿದ್ದಾರೆ. ನೂತನ ‘‘ನೀತಿ’’ಯ ಬಗ್ಗೆ ಅಭಿಪ್ರಾಯಗಳನ್ನು ಪಡೆಯಲು ಅದರ ಪ್ರತಿಗಳನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ‘ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು’’ಗೆ ಸಂಬಂಧಿಸಿದ ನೂತನ ಕರಡು ನೀತಿಯು 2020ರಲ್ಲಿ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳಿಗೆ ಹಿಂಬಾಗಿಲ ಪ್ರವೇಶವನ್ನು ನೀಡುತ್ತದೆ ಎಂಬುದಾಗಿ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರಕಾರವು ಬಣ್ಣಿಸಿದೆ.

‘‘ಪಂಜಾಬ್‌ನಲ್ಲಿ ರೈತರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ಅಹಂಕಾರದಿಂದ ತುಂಬಿ ತುಳುಕುತ್ತಿರುವ ಬಿಜೆಪಿಯು ಅವರೊಂದಿಗೆ ಮಾತನಾಡುತ್ತಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಮೂರು ವರ್ಷಗಳ ಹಿಂದೆ ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿತ್ತು. ಆದರೆ, ಈಗ ಅದು ಅಂದು ರೈತರಿಗೆ ನೀಡಲಾಗಿದ್ದ ಭರವಸೆಗಳಿಂದ ಹಿಂದೆ ಸರಿದಿದೆ’’ ಎಂದು ತನ್ನ ಎಕ್ಸ್ ಸಂದೇಶದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.

‘‘ತಾನು ಯಾರೊಂದಿಗೂ ಮಾತನಾಡುವುದಿಲ್ಲ ಎನ್ನುವಂಥ ಅಹಂಕಾರ ಬಿಜೆಪಿಗೆ ಯಾಕೆ’’ ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

‘‘ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತರನ್ನು ದೇವರು ಸುರಕ್ಷಿತವಾಗಿಡಲಿ. ಆದರೆ, ಅವರಿಗೆ ಏನಾದರೂ ಆದರೆ ಅದಕ್ಕೆ ಬಿಜೆಪಿಯೇ ಹೊಣೆ’’ ಎಂದು ಅವರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News