ರೈತ ನಾಯಕ ದಲ್ಲೇವಾಲ್ ಉಪವಾಸ ಮುಷ್ಕರ ನಿಲ್ಲಿಸಲು ತಪ್ಪು ಅಭಿಪ್ರಾಯ ಸೃಷ್ಟಿ : ಪಂಜಾಬ್‌ನ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ
ಹೊಸದಿಲ್ಲಿ : ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರ ಉಪವಾಸ ಮುಷ್ಕರ ನಿಲ್ಲಿಸಲು ಮಾಧ್ಯಮದಲ್ಲಿ ತಪ್ಪು ಅಭಿಪ್ರಾಯವನ್ನು ರೂಪಿಸುತ್ತಿರುವ ಪಂಜಾಬ್ ಸರಕಾರದ ಅಧಿಕಾರಿಗಳು ಹಾಗೂ ಕೆಲವು ರೈತ ನಾಯಕರನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ, ದಲ್ಲೇವಾಲ್ ಅವರ ಉಪವಾಸ ಮುಷ್ಕರವನ್ನು ನಿಲ್ಲಿಸಲು ನ್ಯಾಯಾಲಯ ಎಂದೂ ಸೂಚಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯ ಇದೆ. ಆದರೆ, ಅವರ ಆರೋಗ್ಯದ ಬಗ್ಗೆ ಮಾತ್ರ ಕಾಳಜಿ ವಹಿಸಿದೆ ಹಾಗೂ ಅವರಿಗೆ ತುರ್ತು ವೈದ್ಯಕೀಯ ನೆರವು ಒದಗಿಸಲು ಬಯಸಿದೆ ಎಂದು ಹೇಳಿದೆ.
ನ್ಯಾಯಾಲಯ ಹೆಚ್ಚು ಏನೂ ಹೇಳಲು ಬಯಸುವುದಿಲ್ಲ. ಆದರೆ, ಪಂಜಾಬ್ ಸರಕಾರದ ಅಧಿಕಾರಿಗಳು ಹಾಗೂ ಕೆಲವು ರೈತ ನಾಯಕರು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಲು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಾಣುತ್ತದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
‘‘ದಲ್ಲೇವಾಲ್ ಅವರ ಕುರಿತು ಕೆಲವು ರೈತ ನಾಯಕರ ಅಭಿಪ್ರಾಯಗಳನ್ನು ನಾವು ಪರಿಶೀಲಿಸಲು ಬಯಸುತ್ತೇವೆ’’ ಎಂದು ಪೀಠ ಹೇಳಿದೆ.
ಪರಿಸ್ಥಿತಿಯನ್ನು ಸಂಕೀರ್ಣಗೊಳಿಸುವ ಯಾವುದೇ ಪ್ರಯತ್ನ ಮಾಡಿರುವುದನ್ನು ಪಂಜಾಬ್‌ನ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ನಿರಾಕರಿಸಿದ್ದಾರೆ. ಉಪವಾಸ ಮುಷ್ಕರವನ್ನು ಅಂತ್ಯಗೊಳಿಸದೆ ವೈದ್ಯಕೀಯ ನೆರವು ಪಡೆದುಕೊಳ್ಳುವಂತೆ ದಲ್ಲೇವಾಲ್ ಅವರನ್ನು ಮನವೊಲಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರು ಆನ್‌ಲೈನ್ ಮೂಲಕ ವಿಚಾರಣೆಗೆ ಹಾಜರಾಗಿರುವುದರಿಂದ ನ್ಯಾಯಾಲಯದ ಸಂದೇಶ ಅವರಿಗೆ ತಲುಪಿದೆ ಎಂದು ಭಾವಿಸುತ್ತೇವೆ ಎಂದು ಪೀಠ ಹೇಳಿದೆ.
ದಲ್ಲೇವಾಲ್ ಅವರನ್ನು ರಾಜ್ಯ ಸರಕಾರ ರೂಪಿಸಿರುವ ವೈದ್ಯಕೀಯ ಸೌಲಭ್ಯಕ್ಕೆ ಸ್ಥಳಾಂತರಿಸುವಂತೆ ಪಂಜಾಬ್ ಸರಕಾರಕ್ಕೆ ನಿರ್ದೇಶಿಸಿ ನ್ಯಾಯಾಲಯ ಡಿಸೆಂಬರ್ 20ರಂದು ನೀಡಿದ ಆದೇಶವನ್ನು ಅನುಸರಿಸಿರುವುದನ್ನು ಸೂಚಿಸುವ ತಮ್ಮ ಅಫಿಡಾವಿಟ್ ಸಲ್ಲಿಸುವಂತೆ ಇಬ್ಬರೂ ಅಧಿಕಾರಿಗಳಿಗೆ ಪೀಠ ಸೂಚಿಸಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 6ಕ್ಕೆ ಮುಂದೂಡಿದೆ.