ನೆರೆಯವನನ್ನು ಕೊಂದು ರುಂಡದೊಂದಿಗೆ ಪೊಲೀಸ್ ಠಾಣೆಗೆ ಹೋದ ತಂದೆ-ಮಗ
ನಾಶಿಕ್ (ಮಹಾರಾಷ್ಟ್ರ): ತಂದೆ ಮತ್ತು ಮಗ ನೆರೆಮನೆಯ ವ್ಯಕ್ತಿಯೊಬ್ಬರನ್ನು ಕೊಡಲಿ ಮತ್ತು ಕತ್ತಿಯಿಂದ ಕಡಿದು ಹತ್ಯೆಗೈದು, ತಲೆಕಡಿದು, ರುಂಡವನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗಿ ಶರಣಾದ ಭೀಕರ ಘಟನೆಯೊಂದು ಮಹಾರಾಷ್ಟ್ರದ ನಾಶಿಕ್ ನಿಂದ ಗುರುವಾರ ವರದಿಯಾಗಿದೆ.
ಘಟನೆಯು ನಾಶಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ನನಶಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
40 ವರ್ಷದ ಸುರೇಶ್ ಬೋಕೆ ಮತ್ತು ಅವನ ಮಗ ತಮ್ಮ ನೆರೆಯ ಗುಲಾಬ್ ರಾಮಚಂದ್ರ ವಾಘ್ಮರೆ ಎಂಬವರನ್ನು ಕಡಿದು ಕೊಂದರು ಎಂದು ಆರೋಪಿಸಲಾಗಿದೆ.
ಆರೋಪಿಗಳು ಮತ್ತು ಸಂತ್ರಸ್ತನ ಕುಟುಂಬಗಳ ನಡುವೆ ದೀರ್ಘಕಾಲದಿಂದ ಮನಸ್ತಾಪವಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘‘ಆರೋಪಿಗಳು ಮತ್ತು ಸಂತ್ರಸ್ತ ಡಿಸೆಂಬರ್ 31ರಂದು ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದ್ದರು. ಆರೋಪಿ ಬೋಕೆಯ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಲು ಸಂತ್ರಸ್ತ ವಾಘ್ಮರೆ ಸಹಾಯ ಮಾಡಿದ್ದಾರೆ ಎನ್ನುವ ಸಂಶಯವನ್ನು ಆರೋಪಿಗಳು ಹೊಂದಿದ್ದರು. ಇದೇ ಕಾರಣಕ್ಕಾಗಿ ಮರು ದಿನ ಬೋಕೆ ಮತ್ತು ಅವನ ಮಗ, ವಾಘ್ಮರೆಯನ್ನು ಕಡಿದು ಕೊಂದರು’’ ಎಂದು ಅಧಿಕಾರಿ ತಿಳಿಸಿದರು.
ಕೊಲೆಯ ಬಗ್ಗೆ ತಿಳಿದ ಗ್ರಾಮಸ್ಥರು ರೊಚ್ಚಿಗೆದ್ದರು. ಗ್ರಾಮಸ್ಥರು ಆರೊಪಿ ಬೋಕೆಯ ಮನೆಗೆ ನುಗ್ಗಿ ಮನೆಯನ್ನು ಧ್ವಂಸಗೊಳಿಸಿದರು ಮತ್ತು ಅವನ ಕಾರಿಗೆ ಬೆಂಕಿ ಹಚ್ಚಿದರು.
ಶಾಂತಿ ಕಾಪಾಡಲು ಗ್ರಾಮದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಮೃತ ವಾಘ್ಮರೆಯ ಪತ್ನಿ ಮೀನಾಬಾಯಿ ಸಲ್ಲಿಸಿದ ದೂರಿನ ಆಧಾರದಲ್ಲಿ ಬುಧವಾರ ರಾತ್ರಿ ಪೇತ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.