ವಿವಾಹವು ಪತ್ನಿಯ ಸ್ವಾಯತ್ತತೆ, ಖಾಸಗಿತನದ ಮೇಲೆ ಪತಿಗೆ ನಿಯಂತ್ರಣ ನೀಡುವುದಿಲ್ಲ: ಅಲಹಾಬಾದ್ ಹೈಕೋರ್ಟ್
ಪ್ರಯಾಗರಾಜ್ : ಹಳೆಯ ವಿಕ್ಟೋರಿಯನ್ ಯುಗದ ಮನಃಸ್ಥಿತಿಯಿಂದ ಹೊರಬರಲು ಮತ್ತು ಪತ್ನಿಯ ಶರೀರ, ಖಾಸಗಿತನ ಮತ್ತು ಹಕ್ಕುಗಳು ಸಂಪೂರ್ಣವಾಗಿ ಆಕೆಗೇ ಸೇರಿದ್ದಾಗಿವೆ ಮತ್ತು ಪತಿಯ ನಿಯಂತ್ರಣ ಅಥವಾ ಮಾಲಿಕತ್ವಕ್ಕೆ ಒಳಪಟ್ಟಿಲ್ಲ ಎಂದು ಒಪ್ಪಿಕೊಳ್ಳಲು ಇದು ಸಕಾಲವಾಗಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.
ತನ್ನ ಪತ್ನಿಯ ಒಪ್ಪಿಗೆಯಿಲ್ಲದೆ ಆಕೆಯೊಂದಿಗಿನ ಆತ್ಮೀಯ ಕ್ಷಣಗಳ ವೀಡಿಯೊಗಳನ್ನು ರಹಸ್ಯವಾಗಿ ಚಿತ್ರೀರಿಸಿಕೊಂಡು ಅವುಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಮತ್ತು ದೃಶ್ಯಾವಳಿಗಳನ್ನು ಆಕೆಯ ಸೋದರ ಸಂಬಂಧಿಯೊಂದಿಗೆ ಶೇರ್ ಮಾಡಿಕೊಂಡಿದ್ದ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾ.ವಿನೋದ ದಿವಾಕರ ಅವರ ಏಕ ನ್ಯಾಯಾಧೀಶ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 67ಬಿ ಅಡಿ ತನ್ನ ವಿರುದ್ಧದ ದೋಷಾರೋಪ ಪಟ್ಟಿ ಮತ್ತು ಕ್ರಿಮಿನಲ್ ಕಲಾಪಗಳನ್ನು ರದ್ದುಗೊಳಿಸುವಂತೆ ಕೋರಿದ್ದ ಆರೋಪಿ,ದೂರುದಾರ ಮಹಿಳೆ ತನ್ನ ಕಾನೂನುಬದ್ಧ ಪತ್ನಿಯಾಗಿರುವುದರಿಂದ ಯಾವುದೇ ಅಪರಾಧವನ್ನು ಹೊರಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದ.
ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸರಕಾರಿ ವಕೀಲರು,ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆರೋಪಿಯೊಂದಿಗೆ ದೂರುದಾರ ಮಹಿಳೆಯ ಕಾನೂನುಬದ್ಧ ಸಂಬಂಧವು ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸುವ ಅಥವಾ ಪ್ರಸಾರ ಮಾಡುವ ಹಕ್ಕನ್ನು ಆತನಿಗೆ ನೀಡುವುದಿಲ್ಲ ಎಂದು ವಾದಿಸಿದರು.
ಪತಿಯ ವಾದಗಳನ್ನು ತಿರಸ್ಕರಿಸಿದ ನ್ಯಾಯಾಲಯವು, ವಿಚಾರಣೆ ಸಂದರ್ಭದಲ್ಲಿ ಇಂತಹ ವಾದಗಳನ್ನು ಎತ್ತಬಹುದು. ಆದರೆ ಸಿಆರ್‌ಪಿಸಿಯ ಕಲಂ 482ರಡಿ ವಿಚಾರಣೆಯನ್ನು ರದ್ದುಗೊಳಿಸಲು ಅವು ಆಧಾರವಾಗುವುದಿಲ್ಲ ಎಂದು ಹೇಳಿತು.
ಮುಖ್ಯ ವಿಷಯವನ್ನು ಪ್ರಸ್ತಾಪಿಸಿದ ನ್ಯಾಯಾಲಯವು,ವಿವಾಹವು ಪತಿಗೆ ತನ್ನ ಪತ್ನಿಯ ಮೇಲೆ ಒಡೆತನ ಅಥವಾ ನಿಯಂತ್ರಣವನ್ನು ನೀಡುವುದಿಲ್ಲ,ಅದು ಆಕೆಯ ಸ್ವಾಯತ್ತತೆ ಮತ್ತು ಖಾಸಗಿತನದ ಹಕ್ಕನ್ನು ದುರ್ಬಲಗೊಳಿಸುವುದಿಲ್ಲ. ಆಪ್ತಕ್ಷಣಗಳ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅರ್ಜಿದಾರ ವೈವಾಹಿಕ ಸಂಬಂಧದ ಪಾವಿತ್ರ್ಯದ ಗಂಭೀರ ಉಲ್ಲಂಘನೆಯನ್ನು ಎಸಗಿದ್ದಾನೆ ಎಂದು ಹೇಳಿತು.