ಕೇರಳದ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಬಿಹಾರದ ರಾಜ್ಯಪಾಲರಾಗಿ ಮುಹಮ್ಮದ್ ಖಾನ್ ಪ್ರಮಾಣ ವಚನ
ತಿರುವನಂತಪುರ : ಇಲ್ಲಿನ ರಾಜಭವನದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕೇರಳದ 23ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ನಿತೀನ್ ಜಾಮ್‌ದಾರ್ ಅವರು ಪ್ರಮಾಣ ವಚನ ಬೋಧಿಸಿದರು.
ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ವರ್ಗಾವಣೆಗೊಂಡಿರುವ ಆರೀಫ್ ಮುಹಮ್ಮದ್ ಖಾನ್ ಅವರ ಉತ್ತರಾಧಿಕಾರಿಯಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಪಾಲ್ಗೊಂಡರು.
ಪಾಟ್ನಾ: ಇಲ್ಲಿನ ರಾಜಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೇರಳದ ಮಾಜಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಬಿಹಾರದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಾಟ್ನಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಕೆ. ವಿನೋದ್ ಚಂದ್ರನ್ ಅವರು ಆರೀಫ್ ಮುಹಮ್ಮದ್ ಖಾನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಅಲ್ಲದೆ, ಇತರ ಸಚಿವರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಕೇರಳದ ರಾಜ್ಯಪಾಲರಾಗಿ ನಿಯೋಜಿತರಾದ ರಾಜೇಂದ್ರ ಅರ್ಲೇಕರ್ ಅವರ ಉತ್ತರಾಧಿಕಾರಿಯಾಗಿ ಆರೀಫ್ ಮುಹಮ್ಮದ್ ಖಾನ್ ಅವರು ಸೇವೆ ಸಲ್ಲಿಸಲಿದ್ದಾರೆ.