ಡಾ. ಮನಮೋಹನ್ ಸಿಂಗ್ ಸ್ಮಾರಕಕ್ಕೆ ಭೂಮಿ ಹಂಚಿಕೆ ಇನ್ನಷ್ಟು ವಿಳಂಬ
ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಗೌರವಾರ್ಥ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಜಾಗ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ. ಸ್ಮಾರಕ ನಿರ್ಮಾಣಕ್ಕೆ ಜಾಗವನ್ನು ಕೇವಲ ಟ್ರಸ್ಟ್ ಗಳಿಗೆ ಮಾತ್ರ ಮಂಜೂರು ಮಾಡಬಹುದಾಗಿದ್ದು, ಡಾ.ಸಿಂಗ್ ಸ್ಮಾರಕ ಟ್ರಸ್ಟ್ ಇನ್ನೂ ನಿರ್ಮಾಣವಾಗದೇ ಇರುವ ಹಿನ್ನೆಲೆಯಲ್ಲಿ ಇಡೀ ಪ್ರಕ್ರಿಯೆ ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿಯವರು ನಿಧನರಾದ ಒಂದು ತಿಂಗಳ ಬಳಿಕ ಅವರ ಸ್ಮಾರಕ ಟ್ರಸ್ಟ್ ನಿರ್ಮಾಣವಾಗಿದ್ದು, ಆ ಬಳಿಕವೇ ಅಟಲ್ ಸಮಿತಿ ನ್ಯಾಸ (ಟ್ರಸ್ಟ್)ಗೆ ಭೂಮಿ ಹಂಚಿಕೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಲಾಗಿದೆ.
ಸ್ಮಾರಕಕ್ಕೆ ಸರ್ಕಾರ ಭೂಮಿಯನ್ನು ಗುರುತಿಸಿ ಇಡಬಹುದು. ಆದರೆ ಸ್ಮಾರಕವನ್ನು ಟ್ರಸ್ಟ್ ನಿರ್ಮಿಸಬೇಕಾಗುತ್ತದೆ. ಡಾ.ಸಿಂಗ್ ಸ್ಮಾರಕಕ್ಕಾಗಿ ರಾಜಘಾಟ್ ಪ್ರದೇಶದಲ್ಲಿ ಲಭ್ಯವಿರುವ ಭೂಮಿಯ ಪ್ರಾಥಮಿಕ ಮೌಲ್ಯಮಾಪನವನ್ನು ಮಾಡಲಾಗಿದೆ. ಜಾಗಕ್ಕಾಗಿ ಟ್ರಸ್ಟ್ ಅರ್ಜಿ ಸಲ್ಲಿಸಬೇಕಿದ್ದು, ಟ್ರಸ್ಟ್ ಇನ್ನೂ ನಿರ್ಮಾಣವಾಗಿಲ್ಲ ಎಂದು ಮೂಲಗಳು ವಿವರಿಸಿವೆ.
ಅಟಲ್ ಸ್ಮಾರಕ ನಿರ್ಮಾಣ ಸಮಿತಿಯ ಸದಸ್ಯರೊಬ್ಬರ ಪ್ರಕಾರ, "ಅಟಲ್ ನಿಧನದ ಬಳಿಕ ಟ್ರಸ್ಟ್ ರಚಿಸಲಾಗಿತ್ತು. ನಾವು ಅರ್ಜಿ ಸಲ್ಲಿಸಿದ ಬಳಿಕ, ಕೇಂದ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಮತ್ತು ಟ್ರಸ್ಟ್ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಲಾಗಿತ್ತು. ಯೋಜನೆ ಮತ್ತು ವಾಸ್ತುಶಿಲ್ಪ ಶಾಲೆ ಸಮಾಧಿಯ ವಿನ್ಯಾಸ ನೀಡಿತ್ತು. ಸ್ಮಾರಕ ನಿರ್ಮಾಣಕ್ಕಾಗಿ ಟ್ರಸ್ಟ್, ಲೋಕೋಪಯೋಗಿ ಇಲಾಖೆಗೆ ಹಣ ಬಿಡುಗಡೆ ಮಾಡಿತ್ತು".