ಉಪದೇಶಿಸುವುದಕ್ಕಿಂತ ರೈತರೊಂದಿಗೆ ಪ್ರಧಾನಿ ಮಾತುಕತೆ ನಡೆಸುವಂತೆ ಮನವಿ ಮಾಡಿ ಬಿಜೆಪಿಗೆ ದಿಲ್ಲಿ ಮುಖ್ಯಮಂತ್ರಿ ಆತಿಶಿ ಸಲಹೆ
ಹೊಸದಿಲ್ಲಿ : ಉಪದೇಶ ನೀಡುವ ಬದಲು ಪಂಜಾಬ್‌ನಲ್ಲಿ ಅಮರಣಾಂತ ಉಪವಾಸ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿ ಎಂದು ದಿಲ್ಲಿ ಮುಖ್ಯಮಂತ್ರಿ ಆತಿಶಿ ಅವರು ಗುರುವಾರ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತನಗೆ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಆತಿಶಿ, ರೈತರ ಸ್ಥಿತಿ ಬಿಜೆಪಿಯ ಆಡಳಿತದಲ್ಲಿರುವಷ್ಟು ಶೋಚನೀಯವಾಗಿಲ್ಲ ಎಂದಿದ್ದಾರೆ.
‘‘ದಾವೂದ್ ಇಬ್ರಾಹಿಂ ಅಹಿಂಸೆಯ ಕುರಿತು ಉಪದೇಶ ನೀಡಿದಂತೆ ಬಿಜೆಪಿ ರೈತರ ಕುರಿತು ಮಾತನಾಡುತ್ತಿದೆ’’ ಎಂದು ರೈತರ ಕುರಿತು ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಬಿಜೆಪಿಯನ್ನು ಕೋರಿದ ತನ್ನ ಪತ್ರದಲ್ಲಿ ಆತಿಶಿ ಹೇಳಿದ್ದಾರೆ.
ಮುಖ್ಯಮಂತ್ರಿ ಆತಿಶಿ ಅವರಿಗೆ ಬುಧವಾರ ಬೆಳಗ್ಗೆ ರವಾನಿಸಿದ ಪತ್ರದಲ್ಲಿ ಚೌಹಾಣ್, ದಿಲ್ಲಿಯ ರೈತರ ಸಮಸ್ಯೆಗಳ ಕುರಿತು ಆಪ್ ಸರಕಾರ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದರು.
‘‘ಪಂಜಾಬ್‌ನಲ್ಲಿ ರೈತರು ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ’’ ಎಂದು ಆತಿಶಿ ಹೇಳಿದರು. ರೈತರೊಂದಿಗೆ ಮಾತುಕತೆ ನಡೆಲು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುವಂತೆ ಅವರು ಚೌಹಾಣ್ ಅವರಿಗೆ ಸಲಹೆ ನೀಡಿದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾದ ಅಡಿಯಲ್ಲಿ ರೈತರು ನಡೆಸಿದ ದಿಲ್ಲಿ ಮಾರ್ಚ್‌ಗೆ ಭದ್ರತಾ ಪಡೆ ತಡೆ ಒಡ್ಡಿದ ಬಳಿಕ ಫೆಬ್ರವರಿ 13ರಿಂದ ಪಂಜಾಬ್ ಹಾಗೂ ಹರ್ಯಾಣದ ನಡುವಿನ ಶಂಭು ಹಾಗೂ ಖನೌರಿ ಗಡಿ ಕೇಂದ್ರಗಳಲ್ಲಿ ಫೆಬ್ರವರಿ 13ರಿಂದ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.