ಮೀರತ್ | ಖಾಸಗಿ ವಿವಿ ಮೈದಾನದಲ್ಲಿ ನಮಾಝ್ ಮಾಡಿದ ವಿದ್ಯಾರ್ಥಿಯ ಬಂಧನ

ಸಾಂದರ್ಭಿಕ ಚಿತ್ರ
ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಖಾಸಗಿ ವಿಶ್ವವಿದ್ಯಾನಿಲಯವಾದ ಐಐಎಂಟಿ ಮೈದಾನದಲ್ಲಿ ನಮಾಝ್ ಮಾಡಿದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು deccanherald ವರದಿ ಮಾಡಿದೆ.
ಖಾಲಿದ್ ಪ್ರಧಾನ್ ಬಂಧಿತ ವಿದ್ಯಾರ್ಥಿ. ಬಲಪಂಥೀಯ ಸಂಘಟನೆಗಳ ಪ್ರತಿಭಟನೆಯ ನಂತರ ವಿದ್ಯಾರ್ಥಿಯನ್ನು ಬಂಧಿಸಲಾಯಿತು. ಐಐಎಂಟಿ ಮೈದಾನದಲ್ಲಿ ವಿದ್ಯಾರ್ಥಿಯೋರ್ವ ನಮಾಝ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಮತ್ತು ಮೂವರು ಭದ್ರತಾ ಸಿಬ್ಬಂದಿಯನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು.
ಐಐಎಂಟಿ ವಿಶ್ವವಿದ್ಯಾಲಯದ ವಕ್ತಾರ ಸುನೀಲ್ ಶರ್ಮಾ ಪ್ರತಿಕ್ರಿಯಿಸಿ, ʼಆಂತರಿಕ ತನಿಖೆಯಲ್ಲಿ ತೆರೆದ ಪ್ರದೇಶದಲ್ಲಿ ನಮಾಝ್ ಮಾಡಿ ವಿಡಿಯೋವನ್ನು ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆʼ ಎಂದು ಹೇಳಿದರು.
ʼಈ ಕುರಿತು ಕಾರ್ತಿಕ್ ಎಂಬಾತನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 299 ಮತ್ತು ಐಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಖಾಲಿದ್ ಪ್ರಧಾನ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆʼ ಎಂದು ಗಂಗಾನಗರ ಎಸ್ಎಚ್ಒ ಅನೂಪ್ ಸಿಂಗ್ ಹೇಳಿದರು.
ಸರ್ಕಲ್ ಆಫೀಸರ್ ಸದರ್ ದೇಹತ್ ಶಿವ ಪ್ರತಾಪ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ʼಐಐಎಂಟಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಮಾಝ್ ಮಾಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಖಾಲಿದ್ ಪ್ರಧಾನ್ ಎಂಬಾತನನ್ನು ಬಂಧಿಸಲಾಗಿದೆʼ ಎಂದು ಹೇಳಿದರು.