ಕೇದಾರನಾಥ: ‘ಹಿಂದು ಭಾವನೆಗಳಿಗೆ ನೋವನ್ನುಂಟು ಮಾಡುತ್ತಿರುವ’ ಹಿಂದುಯೇತರರನ್ನು ಪ್ರದೇಶದಿಂದ ನಿಷೇಧಿಸಲು ಬಿಜೆಪಿ ಶಾಸಕಿ ಆಗ್ರಹ

Photo Credit | PTI
ಕೇದಾರನಾಥ: ಹಿಂದುಯೇತರರು ಸ್ಥಳೀಯರ ಭಾವನೆಗಳಿಗೆ ನೋವನ್ನುಂಟು ಮಾಡುವ ಪರಿಪಾಠಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಂಬಿಕೆಗೆ ಅಪಚಾರವನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೇದಾರನಾಥ ಕ್ಷೇತ್ರದ ಬಿಜೆಪಿ ಶಾಸಕಿ ಆಶಾ ನೌಟಿಯಾಲ್, ಅವರನ್ನು ಪ್ರದೇಶದಿಂದ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಶಾಸಕಿಯ ಈ ಹೇಳಿಕೆಯು ಅವರ ಹುದ್ದೆಗೆ ಅವಮಾನವಾಗಿದೆ ಎಂದು ಕಾಂಗ್ರೆಸ್ ಬಣ್ಣಿಸಿದೆ.
‘ನಾನು ಸ್ಥಳೀಯರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಹಿಂದುಯೇತರರು ಅಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ವಿಶ್ವಾದ್ಯಂತದ ಜನರು ಬಾಬಾ ಕೇದಾರರ ದರ್ಶನಕ್ಕೆ ತೆರಳುತ್ತಾರೆ,ಆದ್ದರಿಂದ ಹಿಂದುಯೇತರರು ಅಲ್ಲಿಗೆ ಹೋಗುವುದನ್ನು ನಿಷೇಧಿಸಬೇಕು. ಇಂತಹುದನ್ನು ನಿರುತ್ತೇಜಿಸಬೇಕು ಎಂದು ಸ್ಥಳೀಯ ಉದ್ಯಮಿಗಳೂ ಆಗ್ರಹಿಸಿದ್ದಾರೆ’ ಎಂದು ಹೇಳಿದ ನೌಟಿಯಾಲ್,ಜನರು ಹಿಂದುಗಳ ಭಾವನೆಗಳಿಗೆ ಘಾಸಿಯನ್ನುಂಟು ಮಾಡುವ ಎಲ್ಲ ನಾಲ್ಕೂ ಧಾಮಗಳು ಹಿಂದುಯೇತರರನ್ನು ನಿಷೇಧಿಸಬೇಕು ಎಂದರು.
ಶಾಸಕಿಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿಯ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ ಅವರು,ನೌಟಿಯಾಲ್ ಹೇಳಿಕೆಯು ಹಿಂದು ಧರ್ಮದ ಭಾವನೆಗಳಿಗೆ ಸಂಬಂಧಿಸಿರುವುದರಿಂದ ಬಿಜೆಪಿಯು ಅದನ್ನು ಬೆಂಬಲಿಸುತ್ತದೆ. ಈ ನಾಲ್ಕು ತೀರ್ಥಯಾತ್ರೆಗಳು ಸನಾತನ ಧರ್ಮದಲ್ಲಿ ಪ್ರಮುಖವಾಗಿವೆ ಮತ್ತು ಪ್ರತಿ ವರ್ಷ ಲಕ್ಷಾಂತರ ಜನರು ಈ ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಕೇದಾರನಾಥದಲ್ಲಿ ಮದ್ಯ ಮತ್ತು ಮಾಂಸವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಈ ಪ್ರದೇಶದ ಉದ್ಯಮಿಗಳು ಆರೋಪಿಸಿದ್ದಾರೆ ಎಂದು ಹೇಳಿದ ಚೌಹಾಣ, ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರು ಪ್ರದೇಶದಲ್ಲಿಯ ಆಚರಣೆಗಳಿಗೆ ವ್ಯತ್ಯಯವನ್ನುಂಟು ಮಾಡುತ್ತಿದ್ದಾರೆ ಮತ್ತು ಮಾಂಸವನ್ನು ಮಾರುತ್ತಿದ್ದಾರೆ ಎಂಬ ಸುದ್ದಿಯಿದೆ. ಕೇದಾರನಾಥನಲ್ಲಿಯ ಉದ್ಯಮಿಗಳು ಈ ವಿಷಯವನ್ನೆತ್ತಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಇಂತಹ ವ್ಯವಹಾರಗಳನ್ನು ನಡೆಸುವುದು ತಪ್ಪು,ಇತರ ವ್ಯಾಪಾರಗಳ ಸೋಗಿನಲ್ಲಿ ಇಲ್ಲಿ ಮದ್ಯದಂಗಡಿಗಳೂ ನಡೆಯುತ್ತಿವೆ ಎಂದರು.
ಉತ್ತರಾಖಂಡ ರಾಜ್ಯದ ಅಬಕಾರಿ ನೀತಿಯಂತೆ ಧಾರ್ಮಿಕ ಸ್ಥಳಗಳ ಸಮೀಪ ಮದ್ಯವನ್ನು ನಿಷೇಧಿಸಲಾಗಿದೆ.
ಈ ನಡುವೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕರಣ ಮಹರಾ ಅವರು,ಶಾಸಕಿಯೋರ್ವರು ರಾಜಕೀಯ ಲಾಭಕ್ಕಾಗಿ ಈ ರೀತಿ ಮಾತನಾಡುವುದು ದುರದೃಷ್ಟಕರ. ಒಬ್ಬರ ಧರ್ಮದ ಆಧಾರದಲ್ಲಿ ಸರಿ ಮತ್ತು ತಪ್ಪನ್ನು ನಿರ್ಧರಿಸುವುದು ಸಾಧ್ಯವಿಲ್ಲ. ಶಾಸಕಿ ಸಂವಿಧಾನದಡಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ ಮತ್ತು ಭಾರತವು ಕಾನೂನಿನ ಎದುರು ಎಲ್ಲ ಪ್ರಜೆಗಳನ್ನೂ ಸಮಾನವಾಗಿ ನೋಡಿಕೊಳ್ಳುವ ದೇಶವಾಗಿದೆ. ನೀವು ಹಲವಾರು ಆರೋಪಗಳನ್ನು ಮಾಡಿದ್ದೀರಿ ಮತ್ತು ನೀವು ಶಾಸಕಿಯಾಗಿದ್ದೀರಿ,ಹೀಗಾಗಿ ಜನರು ಇಂತಹ ವಿಷಯಗಳಲ್ಲಿ ತೊಡಗಿಕೊಳ್ಳುವುದನ್ನು ತಡೆಯಿರಿ. ಕೇವಲ ಅಲ್ಪಸಂಖ್ಯಾಕರನ್ನೇಕೆ ಗುರಿಯಾಗಿಸಿಕೊಳ್ಳುತ್ತೀರಿ? ಪ್ರತಿಯೊಬ್ಬ ಪ್ರಜೆಯನ್ನೂ ಪ್ರಜೆಯಂತೆಯೇ ನೋಡಬೇಕು ಎಂದು ಹೇಳಿದರು.