ಮಲಿವಾಲ್ ಹಲ್ಲೆ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗದ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್ ಕುಮಾರ್

Update: 2024-05-17 15:23 GMT

ಬಿಭವ ಕುಮಾರ್ | PC : PTI 

ಹೊಸದಿಲ್ಲಿ: ಆಪ್ ನ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ ಕುಮಾರ್ ಶುಕ್ರವಾರ ರಾಷ್ಟ್ರೀಯ ಮಹಿಳಾ ಆಯೋಗ (NCW)ದ ಮುಂದೆ ಹಾಜರಾಗಲು ವಿಫಲಗೊಂಡಿದ್ದಾರೆ.

ಮಲಿವಾಲ್ ಮೇಲೆ ಹಲ್ಲೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ಅನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದ ಎನ್ಸಿಡಬ್ಲ್ಯು ಶುಕ್ರವಾರ ಪೂರ್ವಾಹ್ನ 11 ಗಂಟೆಗೆ ತನ್ನ ಮುಂದೆ ಹಾಜರಾಗುವಂತೆ ಕುಮಾರ್ಗೆ ಸಮನ್ಸ್ ಹೊರಡಿಸಿತ್ತು.

‘ಆಯೋಗದ ತಂಡವೊಂದು ಕುಮಾರ್ಗೆ ಸಮನ್ಸ್ ಜಾರಿಗೊಳಿಸಲು ಗುರುವಾರ ಅವರ ನಿವಾಸಕ್ಕೆ ತೆರಳಿತ್ತಾದರೂ ಅವರು ಮನೆಯಲ್ಲಿರಲಿಲ್ಲ. ನೋಟಿಸನ್ನು ಸ್ವೀಕರಿಸಲು ಅವರ ಪತ್ನಿ ನಿರಾಕರಿಸಿದ್ದರು. ಇಂದು ಕೂಡ ಆಯೋಗದ ತಂಡವು ಪೋಲಿಸರೊಂದಿಗೆ ಕುಮಾರ್ ನಿವಾಸಕ್ಕೆ ತೆರಳಿತ್ತು. ಶನಿವಾರವೂ ಅವರು ಆಯೋಗದ ಮುಂದೆ ಹಾಜರಾಗಿದ್ದರೆ ವಿಚಾರಣೆಗೆ ನಾವೇ ಖುದ್ದಾಗಿ ತೆರಳುತ್ತೇವೆ ’ಎಂದು ಎನ್ಸಿಡಬ್ಲ್ಯುಅಧ್ಯಕ್ಷೆ ರೇಖಾ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಸೋಮವಾರ ಬೆಳಿಗ್ಗೆ ಸಿವಿಲ್ ಲೈನ್ಸ್ ಪೋಲಿಸ್ ಠಾಣೆಗೆ ತೆರಳಿದ್ದ ಮಲಿವಾಲ್,ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ಖಾಸಗಿ ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಗುರುವಾರ ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿರುವ ದಿಲ್ಲಿ ಪೋಲಿಸರು ಕುಮಾರ್ ಅವರನ್ನು ಆರೋಪಿಯನ್ನಾಗಿ ಹೆಸರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಈ ನಡುವೆ ಗುರುವಾರ ದೂರು ದಾಖಲಿಸಿದ ಬಳಿಕ ತನ್ನ ಮೌನ ಮುರಿದ ಮಲಿವಾಲ್,ಆರೋಪಿಯ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನೊಂದಿಗೆ ಕೆಟ್ಟ ಘಟನೆ ನಡೆದಿದೆ. ಈ ಬಗ್ಗೆ ಪೋಲಿಸರಿಗೆ ನನ್ನ ಹೇಳಿಕೆಯನ್ನು ನೀಡಿದ್ದೇನೆ. ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆಶಿಸಿದ್ದೇನೆ. ಕಳೆದ ಕೆಲವು ದಿನಗಳು ನನ್ನ ಪಾಲಿಗೆ ಅತ್ಯಂತ ಕಠಿಣವಾಗಿದ್ದವು. ನನಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದಗಳು. ನನ್ನ ಚಾರಿತ್ರ್ಯ ಹನನಕ್ಕೆ ಪ್ರಯತ್ನಿಸಿದವರು ಇನ್ನೊಂದು ಪಕ್ಷದ ಸೂಚನೆಯ ಮೇರೆಗೆ ನಾನು ಈ ಆರೋಪವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ದೇವರು ಅವರನ್ನೂ ಸುಖವಾಗಿಡಲಿ ’ ಎಂದು ಮಲಿವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದಲ್ಲಿ ಮಹತ್ವದ ಚುನಾವಣೆ ನಡೆಯುತ್ತಿದೆ ಮತ್ತು ದೇಶದ ಸಮಸ್ಯೆಗಳು ತನ್ನ ಪ್ರಕರಣಕ್ಕಿಂತ ಮುಖ್ಯವಾಗಿವೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News