ಪ್ರಧಾನಿ ‘ವಿಕಸಿತ್ ಭಾರತ್’ ಸಾಮಾನ್ಯ ಜನರ ಜೇಬು ಬರಿದು ಮಾಡಿದೆ: ಮಲ್ಲಿಕಾರ್ಜುನ ಖರ್ಗೆ

Update: 2025-02-27 20:19 IST
Mallikarjun Kharge

ಮಲ್ಲಿಕಾರ್ಜುನ ಖರ್ಗೆ |PC : PTI 

  • whatsapp icon

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ್’ ಸಾಮಾನ್ಯ ಭಾರತೀಯರ ಜೇಬನ್ನು ಬರಿದು ಮಾಡಿದೆ ಹಾಗೂ ಆಯ್ದ ಅತೀ ಶ್ರೀಮಂತರ ತಿಜೋರಿಯನ್ನು ತುಂಬಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರತಿಪಾದಿಸಿದ್ದಾರೆ.

ಜಾಗತಿಕ ಸುಂಕ ಸಮರ ಹಾಗೂ ವ್ಯಾಪಾರ ನಿರ್ಬಂಧದ ಸುಳಿಯಲ್ಲಿ ಭಾರತ ಸಿಲುಕಿಕೊಂಡಿದೆ. ಆದರೆ, ಕೇಂದ್ರ ಸರಕಾರದ ಬಜೆಟ್ ಘೋಷಣೆಗಳು ಈ ಪರಿಸ್ಥಿತಿಯನ್ನು ಎದುರಿಸುವಲ್ಲಿ ನಿಷ್ಪ್ರಯೋಜಕವಾಗಿವೆ ಎಂದು ಅವರು ಹೇಳಿದ್ದಾರೆ.

‘‘ನರೇಂದ್ರ ಮೋದಿ ಜಿ ಅವರೇ, 100 ಕೋಟಿ ಭಾರತೀಯರಿಗೆ ವೆಚ್ಚ ಮಾಡಲು ಯಾವುದೇ ಹೆಚ್ಚುವರಿ ಆದಾಯ ಇಲ್ಲ. ನಮ್ಮ ಜಿಡಿಪಿಯ ಶೇ. 60 ಇವರ ಖರೀದಿಯನ್ನು ಅವಲಂಬಿಸಿದೆ. ಆದರೆ, ಭಾರತದ ಆರ್ಥಿಕ ಬೆಳವಣಿಗೆ ಹಾಗೂ ಬಳಕೆಯನ್ನು ಕೇವಲ ಶೇ. 10ರಷ್ಟು ಜನರು ಮಾತ್ರ ಮುನ್ನಡೆಸುತ್ತಿದ್ದಾರೆ. ಶೇ. 90 ಜನರು ತಮ್ಮ ದೈನಂದಿನ ಅಗತ್ಯದ ವಸ್ತುಗಳನ್ನು ಖರೀದಿಸಲು ಶಕ್ತರಲ್ಲ’’ ಎಂದು ಅವರು ‘ಎಕ್ಸ್’ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತದ ತೆರಿಗೆ ಪಾವತಿಸುವ ಶೇ. 50ರಷ್ಟು ಜನರ ವೇತನ ಕಳೆದ ಒಂದು ದಶಕದಿಂದ ಏರಿಕೆಯಾಗಿಲ್ಲ ಅಥವಾ ಸ್ಪಲ್ಪ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೇತನ ಋಣಾತ್ಮಕ ಬೆಳವಣಿಗೆಯಾಗಿದೆ. ಸಂಪತ್ತಿನ ಕೇಂದ್ರೀಕರಣ ಹೆಚ್ಚುತ್ತಿದೆ. ಆದಾಯ ಎಲ್ಲರಿಗೂ ಹಂಚಿಕೆ ಮಾಡುವಲ್ಲಿ ನಿಮ್ಮ ನೀತಿಗಳು ವಿಫಲವಾಗಿವೆ ಎಂದು ಅವರು ಹೇಳಿದರು.

ಕಳೆದ 10 ವರ್ಷಗಳಲ್ಲಿ ನಿಶ್ಚಲ ವೇತನ, ನಿರಂತರ ಹಣದುಬ್ಬರ ಹಾಗೂ ಕುಸಿಯುತ್ತಿರುವ ಬಳಕೆಯಿಂದಾಗಿ ಕುಟುಂಬಗಳ ಉಳಿತಾಯ ಕಳೆದ 50 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಆದಾಯ ಅಸಮಾನತೆ ಕಳೆದ 100 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಕುಟುಂಬದ ಸಾಲ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತ ಜಾಗತಿಕ ಸುಂಕ ಸಮರ ಹಾಗೂ ವ್ಯಾಪಾರ ನಿರ್ಬಂಧದ ಸಮಸ್ಯೆ ಎದುರಿಸುತ್ತಿದೆ. ನಮ್ಮ ಯುವ ಜನರಿಗೆ ನಿರುದ್ಯೋಗದ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್ ಘೋಷಣೆಗಳು ಈ ಪರಿಸ್ಥಿತಿಯನ್ನು ಎದುರಿಸಲು ವಿಫಲವಾಗಿವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News