ಮಕ್ಕಳಲ್ಲಿ ಅಪೌಷ್ಟಿಕತೆ: ‌ತಾಳೆಯಾಗದ ʼಪೋಷಣ್ ಟ್ರ್ಯಾಕರ್ʼ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

Update: 2024-03-18 12:30 GMT

ಸಾಂದರ್ಭಿಕ ಚಿತ್ರ | Photo: PTI 

 

ಹೊಸದಿಲ್ಲಿ: ಮಕ್ಕಳಲ್ಲಿ ಪೌಷ್ಟಿಕತೆ ಕುರಿತು ಭಾರತ ಸರಕಾರದ ಮೊಬೈಲ್ ಫೋನ್ ಆಧಾರಿತ ಪೌಷ್ಟಿಕಾಂಶ ಕಣ್ಗಾವಲು ವ್ಯವಸ್ಥೆ ‘ಪೋಷಣ ಟ್ರ್ಯಾಕರ್’ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್) 2019-21ರ ದತ್ತಾಂಶಗಳ ನಡುವೆ ವ್ಯತ್ಯಾಸಗಳನ್ನು ಸಂಶೋಧಕರು ಬೆಟ್ಟು ಮಾಡಿದ್ದಾರೆ. ಹೆಚ್ಚಾಗಿ ಎನ್‌ಎಫ್‌ಎಚ್‌ಎಸ್ ವರದಿಯಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆಯ ಅಂದಾಜಿಗಿಂತ ಪೋಷಣ ಟ್ರ್ಯಾಕರ್‌ನ ಅಂಕಿಅಂಶಗಳು ಕಡಿಮೆಯಿರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ ಎಂದು The Hindu ವರದಿ ಮಾಡಿದೆ.

ಉದಾಹರಣೆಗೆ ಪೋಷಣ್ ಟ್ರ್ಯಾಕರ್ ಮೂಲಕ ದಾಖಲಾಗಿರುವ ಆರು ವರ್ಷದ ಕೆಳಗಿನ ಕಡಿಮೆ ತೂಕವನ್ನು ಹೊಂದಿರುವ ಮಕ್ಕಳ ಪ್ರಮಾಣವು ಎನ್‌ಎಫ್‌ಎಚ್‌ಎಸ್ ವರದಿಯಲ್ಲಿನ ಪ್ರಮಾಣಕ್ಕಿಂತ ಶೇ.13.7ರಷ್ಟು ಕಡಿಮೆಯಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮೂರು ವರ್ಷಗಳ ಹಿಂದೆ ಬಿಡುಗಡೆಗೊಳಿಸಿದ ಪೋಷಣ ಟ್ರ್ಯಾಕರ್ ಮಕ್ಕಳ ಪೋಷಣೆಯ ಕುರಿತು ನೈಜ ಸಮಯದ ಮಾಹಿತಿಗಳನ್ನು ಸಂಗ್ರಹಿಸುವ ಮೊಬೈಲ್ ಆ್ಯಪ್ ಆಗಿದ್ದು,‌ ಅಂಗನವಾಡಿ ಕೇಂದ್ರಗಳ ಶೇ.95ಕ್ಕೂ ಅಧಿಕ ಮಕ್ಕಳನ್ನು ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿದೆ.

ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ಒದಗಿಸುವ ಅಂಗನವಾಡಿ ಸಿಬ್ಬಂದಿಗಳು ಪೋಷಣ ಟ್ರ್ಯಾಕರ್‌ಗಾಗಿ ಅವರ ತೂಕ ಮತ್ತು ಎತ್ತರವನ್ನು ಅಳೆಯುತ್ತಾರೆ. ಎಲ್ಲ ರಾಜ್ಯಗಳ ದತ್ತಾಂಶಗಳು ಪಬ್ಲಿಕ್ ಡ್ಯಾಷ್‌ಬೋರ್ಡ್‌ನಲ್ಲಿ ಲಭ್ಯವಿದ್ದು,ಇವುಗಳನ್ನು ತಿಂಗಳಿಗೊಮ್ಮೆ ನವೀಕರಿಸಲಾಗುತ್ತದೆ.

ಸೆಪ್ಟಂಬರ್ 2023ರಿಂದ ಪೋಷಣ ಟ್ರ್ಯಾಕರ್ ದತ್ತಾಂಶಗಳನ್ನು ಬಳಸಿರುವ ಭಾರತ ಮತ್ತು ಬ್ರಿಟನ್‌ನ ಸಂಶೋಧಕರು,ತೀವ್ರ ಅಪೌಷ್ಟಿಕತೆಯ ಎರಡು ಪ್ರಮುಖ ಸೂಚಕಗಳಾದ ಕಡಿಮೆ ತೂಕ ಮತ್ತು ಕೃಶವಾಗುವಿಕೆಗೆ ಸಂಬಂಧಿಸಿದ ಪೋಷಣ ಟ್ರ್ಯಾಕರ್ ಮತ್ತು ಎನ್‌ಎಫ್‌ಎಚ್‌ಎಸ್ ದತ್ತಾಂಶಗಳ ನಡುವೆ ವ್ಯತ್ಯಾಸಗಳನ್ನು ಗಮನಿಸಿದ್ದಾರೆ.

2023 ಸೆಪ್ಟಂಬರ್‌ನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿಯ ಸುಮಾರು 8.3 ಕೋಟಿ ಮಕ್ಕಳ ಪೈಕಿ ಶೇ.39ರಷ್ಟು ಮಕ್ಕಳು ಕುಬ್ಜತೆಯನ್ನು ಅನುಭವಿಸಿದ್ದಾರೆ ಎಂದು ಪೋಷಣ ಟ್ರ್ಯಾಕರ್ ದತ್ತಾಂಶಗಳು ತೋರಿಸಿವೆ. ಶೇ.18ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದರೆ ಶೇ.6ರಷ್ಟು ಮಕ್ಕಳು ಕೃಶಗೊಂಡಿದ್ದರು.

ಎನ್‌ಎಫ್‌ಎಚ್‌ಎಸ್ ದತ್ತಾಂಶಗಳಿಗೆ ಹೋಲಿಸಿದರೆ ಪೋಷಣ್ ಟ್ರ್ಯಾಕರ್‌ನಲ್ಲಿ ಕುಬ್ಜತೆಯ ಪ್ರಮಾಣ ಶೇ.1.8ರಷ್ಟು,‌ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ.13.7ರಷ್ಟು ಮತ್ತು ಕೃಶಕಾಯದ ಮಕ್ಕಳ ಪ್ರಮಾಣ ಶೇ.12.1ರಷ್ಟು ಕಡಿಮೆಯಿದ್ದವು.

ಇದಕ್ಕೆ ವ್ಯತಿರಿಕ್ತವಾಗಿ ಎನ್‌ಎಫ್‌ಎಚ್‌ಎಸ್‌ಗೆ ಹೋಲಿಸಿದರೆ ಪೋಷಣ್ ನಲ್ಲಿ ಅಧಿಕ ತೂಕದ ಮಕ್ಕಳ ಪ್ರಮಾಣ ಸರಾಸರಿ ಶೇ.0.68ರಷ್ಟು ಅಧಿಕವಾಗಿತ್ತು.

ಪೋಷಣ್ ಟ್ರ್ಯಾಕರ್ ಸಂಗ್ರಹಿಸುವ ದತ್ತಾಂಶಗಳು 2023ರಲ್ಲಿ ಅಪೌಷ್ಟಿಕತೆಯ ನಿಜವಾದ ಪ್ರಮಾಣವನ್ನು ಸೂಚಿಸಿದ್ದರೆ ಎನ್‌ಎಫ್‌ಎಚ್‌ಎಸ್ 2019-21 ಹಳೆಯ ದತ್ತಾಂಶಗಳನ್ನು ಪ್ರತಿನಿಧಿಸಿದ್ದು ಈ ವ್ಯತ್ಯಾಸಗಳಿಗೆ ಒಂದು ಸಂಭಾವ್ಯ ವಿವರಣೆಯಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಪೋಷಣ ಟ್ರ್ಯಾಕರ್ ಬಳಸಿಕೊಂಡು ನೈಜ ಸಮಯದ ಸಮುದಾಯ ಆಧಾರಿತ ಕಣ್ಗಾವಲು ವ್ಯವಸ್ಥೆಯು ಪೌಷ್ಟಿಕಾಂಶ ಸೇವೆಗಳ ಸುಧಾರಣೆಗೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News