ಮಮತಾ ಬ್ಯಾನರ್ಜಿ ಸರ್ವ ಧರ್ಮ ರ‍್ಯಾಲಿ ಸಮಾಪನೆ

Update: 2024-01-22 15:31 GMT

ಮಮತಾ ಬ್ಯಾನರ್ಜಿ | Photo : PTI 

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ವಧರ್ಮ ರ‍್ಯಾಲಿ ಸೋಮವಾರ ಸಂಜೆ ಪಾರ್ಕ್ ಸರ್ಕಸ್ ಮೈದಾನಕ್ಕೆ ತಲುಪಿ ಸಮಾಪನೆಗೊಂಡಿತು.

ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಕಾಲಿಘಾಟ್ ದೇವಾಲಯದಲ್ಲಿ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಬಳಿಕ ಹಝ್ರಾ ಮೋರೆಯಿಂದ ಸರ್ವ ಧರ್ಮ ರ‍್ಯಾಲಿ ಆರಂಭಿಸಿದ್ದರು. ಮಮತಾ ಬ್ಯಾನರ್ಜಿ ಅವರೊಂದಿಗೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಹಲವು ಸಂಸದರು, ರಾಜ್ಯ ಸಚಿವರು ಹಾಗೂ ಶಾಸಕರು ಪಾಲ್ಗೊಂಡಿದ್ದರು.

ರ‍್ಯಾಲಿಯಲ್ಲಿ ಮತ ಭೇದ ಮರೆತು ಧಾರ್ಮಿಕ ನಾಯಕರು ಕೂಡ ಪಾಲ್ಗೊಂಡರು. ರ‍್ಯಾಲಿ ಪಾರ್ಕ್ ಸರ್ಕಸ್ ಮೈದಾನಕ್ಕೆ ತಲುಪಿ ಸಮಾಪನಗೊಳ್ಳುವ ಮುನ್ನ ಮಮತಾ ಬ್ಯಾನರ್ಜಿ ಅವರು ಗರ್ಚಾದ ಗುರುದ್ವಾರ, ಪಾರ್ಕ್ ಸರ್ಕಸ್ ನ ಚರ್ಚ್ ಹಾಗೂ ಮಸೀದಿಗೆ ಭೇಟಿ ನೀಡಿದರು.

ಅನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಹಿಂದುಗಳನ್ನು ವಿಭಜಿಸಲು ಮಾತ್ರ ಪ್ರಯತ್ನಿಸುತ್ತಿಲ್ಲ. ಬದಲಾಗಿ ಅಲ್ಪಸಂಖ್ಯಾತರನ್ನು ವಿಭಜಿಸಲು ಮುಸ್ಲಿಮರ ನಡುವೆ ಮಧ್ಯವರ್ತಿಗಳ ಗುಂಪೊಂದನ್ನು ಸೃಷ್ಟಿಸುತ್ತಿದೆ. ಆದರೆ, ನಾನು ಅಂತಹ ಕೃತ್ಯದಲ್ಲಿ ತೊಡಗುವುದಿಲ್ಲ ಎಂದರು.

ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಕೆಲವರು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮುಸ್ಲಿಮರಿಗೆ ಬೆದರಿಕೆ ಒಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಹೇಳುತ್ತೇನೆ ನಿಮ್ಮ ಕಣ್ಣಿನಿಂದ ಧರ್ಮದ ಕನ್ನಡಕವನ್ನು ತೆಗೆಯಿರಿ. ಆಗ ನೀವು ಸಂಪೂರ್ಣ ದೇಶ ಅಪಾಯದಲ್ಲಿರುವುದನ್ನು ಕಾಣುತ್ತೀರಿ ಎಂದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News