ಕೇರಳ | ಮಲಪ್ಪುರಂನಲ್ಲಿ ಮೃತಪಟ್ಟ ಯುವಕನ ದೇಹದಲ್ಲಿ ನಿಫಾ ಸೋಂಕು ಪತ್ತೆ : ಆರೋಗ್ಯ ಸಚಿವೆ

Update: 2024-09-15 13:08 GMT

ಸಾಂದರ್ಭಿಕ ಚಿತ್ರ

ಕೋಝಿಕ್ಕೋಡ್ : ಮಲಪ್ಪುರಂನ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಮೃತಪಟ್ಟ 24 ವರ್ಷದ ಯುವಕನಿಗೆ ನಿಫಾ ವೈರಸ್ ಸೋಂಕು ತಗುಲಿತ್ತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ರವಿವಾರ ತಿಳಿಸಿದ್ದಾರೆ.

ಯುವಕನ ಸಾವಿನ ನಂತರ ಪ್ರಾದೇಶಿಕ ವೈದ್ಯಾಧಿಕಾರಿ ನಡೆಸಿದ ತನಿಖೆಯಲ್ಲಿ ನಿಫಾ ಸೋಂಕಿನ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ. " ಮೃತ ವ್ಯಕ್ತಿಯ ಮಾದರಿಗಳನ್ನು ತಕ್ಷಣವೇ ಪರೀಕ್ಷೆಗೆ ಕಳುಹಿಸಲಾಗಿತ್ತು. ಪಾಸಿಟಿವ್ ವರದಿ ಬಂದಿದೆ" ಎಂದು ಸಚಿವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಮಲಪ್ಪುರಂ ಮೂಲದ ವ್ಯಕ್ತಿ ಬೆಂಗಳೂರಿನಿಂದ ಆಗಮಿಸಿದ್ದರು. ಸೆಪ್ಟೆಂಬರ್ 9 ರಂದು ಅವರು ನಿಧನರಾದರು. ಅವರ ಮಾದರಿಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವರದಿಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಮಲಪ್ಪುರಂ ಆರೋಗ್ಯ ಅಧಿಕಾರಿಗಳು ತಿಳಿಸಿದರು. ನಂತರ ಆರೋಗ್ಯ ಸಚಿವರು ಶನಿವಾರ ರಾತ್ರಿಯೇ ಉನ್ನತ ಮಟ್ಟದ ಸಭೆಯನ್ನು ನಡೆಸಿ ಅಗತ್ಯ ಕ್ರಮಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ರವಿವಾರ ನೀಡಿರುವ ಫಲಿತಾಂಶವೂ ಸೋಂಕನ್ನು ದೃಢಪಡಿಸಿದೆ. ಶನಿವಾರ ರಾತ್ರಿಯೇ 16 ಸಮಿತಿಗಳನ್ನು ರಚಿಸಲಾಗಿದ್ದು, ಮುಂಜಾಗೃತ ಕ್ರಮವಾಗಿ ಮೃತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ 151 ಜನರ ಪಟ್ಟಿ ತಯಾರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಮೃತ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೇನ್ ಮಾಡಲಾಗಿದೆ. ಐವರಲ್ಲಿ ಸಣ್ಣ ಜ್ವರ ಮತ್ತು ರೋಗಲಕ್ಷಣಗಳು ಕಂಡುಬಂದಿದೆ. ಅವರ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವೀಣಾ ಜಾರ್ಜ್ ಹೇಳಿದರು.

ನಿಫಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಲಪ್ಪುರಂನ ಬಾಲಕ ಜುಲೈ 21 ರಂದು ಮೃತಪಟ್ಟಿದ್ದನು. ಈ ಪ್ರಕರಣವು 2024ರಲ್ಲಿ ರಾಜ್ಯದಲ್ಲಿ ದಾಖಲಾದ ಮೊದಲ ನಿಫಾ ಸೋಂಕಿನ ಪ್ರಕರಣವಾಗಿತ್ತು.

2018, 2021 ಮತ್ತು 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಮತ್ತು 2019 ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲಿ ನಿಫಾ ಸೋಂಕಿನ ಪ್ರಕರಣಗಳು ವರದಿಯಾಗಿತ್ತು. ಕೋಝಿಕ್ಕೋಡ್, ವಯನಾಡ್, ಇಡುಕ್ಕಿ, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಬಾವಲಿಗಳಲ್ಲಿ ನಿಫಾ ವೈರಸ್ ಲಕ್ಷಣಗಳು ಪತ್ತೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News