ಮೊಬೈಲ್ ಕಳವುಗೈದ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ವಿದ್ಯಾರ್ಥಿಗಳು

Update: 2024-07-03 06:03 GMT

ಸಾಂದರ್ಭಿಕ ಚಿತ್ರ (PTI)

ಕೋಲ್ಕತ್ತಾ: ಮೂರು ದಿನಗಳ ಹಿಂದೆ, ಸೋಮವಾರದಂದು ಉದಯನ್ ವಿದ್ಯಾರ್ಥಿ ನಿಲಯದಲ್ಲಿ 37 ವರ್ಷದ ಟಿವಿ ಮತ್ತು ಮೊಬೈಲ್ ಮೆಕಾನಿಕ್ ಅನ್ನು ವಿದ್ಯಾರ್ಥಿಗಳ ಗುಂಪೊಂದು ಥಳಿಸಿ ಹತ್ಯೆಗೈದ ನಂತರ, ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವಿಧಿ ವಿಜ್ಞಾನ ಅಧಿಕಾರಿಗಳು ಘಟನೆಯಲ್ಲಿ ಬಳಕೆಯಾಗಿದೆಯೆನ್ನಲಾದ ಬ್ಯಾಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬೆಲ್ಗಾಚಿಯ ನಿವಾಸಿಯಾದ ಇರ್ಶಾದ್ ಅಲಂ ಎಂಬ ವ್ಯಕ್ತಿ ಮೊಬೈಲ್ ಕದ್ದಿದ್ದಾನೆ ಎಂಬ ಶಂಕೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳು ಆತನನ್ನು ಮನ ಬಂದಂತೆ ಥಳಿಸಿ ಹತ್ಯೆಗೈದಿದ್ದರು. ಈ ಸಂಬಂಧ ಇಲ್ಲಿಯವರೆಗೆ 14 ಮಂದಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ನೇರವಾಗಿ ಭಾಗಿಯಾಗಿರುವ ಇನ್ನೂ ಇಬ್ಬರು ವಿದ್ಯಾರ್ಥಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ವಿಧಿ ವಿಜ್ಞಾನ ಅಧಿಕಾರಿಗಳ ತಂಡವು ಇಲ್ಲಿಯವರೆಗೆ ವಿವಿಧ ಮಾದರಿಗಳನ್ನು ಸಂಗ್ರಹಿಸಿದೆ. ವಿಶೇಷವಾಗಿ, ಘಟನೆ ನಡೆದ ಎರಡನೆ ಅಂತಸ್ತಿನಲ್ಲಿನ ಕೊಠಡಿಯಿಂದ ರಕ್ತದ ಕಲೆಯ ಮಾದರಿಗಳು ಹಾಗೂ ಮುರಿದ ಬ್ಯಾಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಸುಳಿವನ್ನು ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿ ನಿಲಯದ ನೆಲ ಮಹಡಿ ಹಾಗೂ ಎರಡನೆ ಅಂತಸ್ತಿನ ಕೊಠಡಿಗಳನ್ನು ಪರೀಶೀಲಿಸುತ್ತಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿ ನಿಲಯದಿಂದ ಪೊಲೀಸರು ಹಲವಾರು ಬ್ಯಾಟ್‌ಗಳು ಹಾಗೂ ಕೋಲುಗಳನ್ನು ಸಂಗ್ರಹಿಸಿದ್ದು, ಈ ವಸ್ತುಗಳೇನಾದರೂ ಹಲ್ಲೆಯ ಸಂದರ್ಭದಲ್ಲಿ ಬಳಕೆಯಾಗಿವೆಯೇ ಎಂದು ವಿಧಿ ವಿಜ್ಞಾನ ತಂಡದ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News