ಉತ್ತರ ಪ್ರದೇಶ | ತಮ್ಮ ಪ್ರತಿಸ್ಪರ್ಧಿಯ ಗೆಲುವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ಮಾಜಿ ಸಂಸದೆ ಮೇನಕಾ ಗಾಂಧಿ
ಲಕ್ನೊ: ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಸುಲ್ತಾನ್ ಪುರ್ ಲೋಕಸಭಾ ಕ್ಷೇತ್ರದ ತಮ್ಮ ಪ್ರತಿಸ್ಪರ್ಧಿ, ಸಮಾಜವಾದಿ ಪಕ್ಷದ ಸಂಸದ ರಾಮ್ ಭೌಲ್ ನಿಷಾದ್ ಗೆಲುವನ್ನು ಪ್ರಶ್ನಿಸಿ ಬಿಜೆಪಿಯ ಮಾಜಿ ಸಂಸದೆ ಮೇನಕಾ ಗಾಂಧಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಪ್ರತಿಸ್ಪರ್ಧಿ ರಾಮ್ ಭೌಲ್ ನಿಷಾದ್ ವಿರುದ್ಧ 43,174 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಮೇನಕಾ ಗಾಂಧಿ, ಶನಿವಾರ ಹೈಕೋರ್ಟ್ ರಿಜಿಸ್ಟ್ರಿಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ಲಕ್ನೊ ಪೀಠದ ಮುಂದೆ ಜುಲೈ 30ರಂದು ವಿಚಾರಣೆಗೆ ಬರುವ ನಿರೀಕ್ಷೆ ಇದೆ.
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ನಿಷಾದ್, ತಮ್ಮ ಕ್ರಿಮಿನಲ್ ಇತಿಹಾಸವನ್ನು ಬಚ್ಚಿಟ್ಟಿದ್ದಾರೆ ಎಂದು ಮೇನಕಾ ಗಾಂಧಿ ತಮ್ಮ ಚುನಾವಣಾ ತಕರಾರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ನಿಷಾದ್ ವಿರುದ್ಧ 12 ಕ್ರಿಮಿನಲ್ ಪ್ರಕರಣಗಳಿದ್ದರೂ, ಕೇವಲ ಎಂಟು ಪ್ರಕರಣಗಳ ಕುರಿತು ಮಾತ್ರ ನಿಷಾದ್ ತಮ್ಮ ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.
ಗೋರಖ್ ಪುರ್ ಜಿಲ್ಲೆಯ ಪಿಪ್ರೈಚ್ ಪೊಲೀಸ್ ಠಾಣೆ ಹಾಗೂ ಬರ್ಹಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ನಿಷಾದ್ ಬಚ್ಚಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ನಿಷಾದ್ ಗೆಲುವನ್ನು ಅನೂರ್ಜಿತಗೊಳಿಸಿ, ಮನೇಕಾ ಗಾಂಧಿ ವಿಜೇತ ಅಭ್ಯರ್ಥಿಯೆಂದು ಘೋಷಿಸಬೇಕೆಂದು ಹೈಕೋರ್ಟ್ ಗೆ ಮನವಿ ಮಾಡಲಾಗಿದೆ.