ಮಣಿಪುರ ಎನ್‌ಕೌಂಟರ್‌ ಗೆ ಬಲಿಯಾದ 10 ಮಂದಿ ಉಗ್ರರಲ್ಲ, ಗ್ರಾಮ ಸ್ವಯಂಸೇವಕರು : ಕುಕಿ-ರೆ ಸಂಘಟನೆ ಪ್ರತಿಪಾದನೆ

Update: 2024-11-12 14:56 GMT

PC : PTI 

ಗುವಾಹಟಿ : ಮಣಿಪುರದ ಜಿರ್‌ಬಾಮ್ ಜಿಲ್ಲೆಯಲ್ಲಿ ಸೋಮವಾರ CRPF ಯೋಧರ ಗುಂಡಿಗೆ ಬಲಿಯಾದ 10 ಮಂದಿಯೂ ಉಗ್ರಗಾಮಿಗಳಲ್ಲ, ಅವರು ಕುಕಿ-ರೆ ಬುಡಕಟ್ಟು ಪಂಗಡಗಳು ವಾಸವಾಗಿರುವ ಗ್ರಾಮಗಳ ಸ್ವಯಂಸೇವಕರೆಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಹಾಗೂ ಕುಕಿ-ರೆ ಸಂಘಟನೆಗಳು ಆಪಾದಿಸಿವೆ. ಭದ್ರತಾಪಡೆಗಳು ಈ ಅಮಾಯಕರ ಮೇಲೆ ದಾಳಿ ನಡೆಸಿ, ಕೊಲೆ ಮಾಡಲಾಗಿದೆ ಎಂದು ಅವು ಹೇಳಿವೆ.

‘‘ ಗುಂಡಿನ ಚಕಮಕಿಯ ಒಂದೇ ಘಟನೆಯಲ್ಲಿ ಇಷ್ಟೊಂದು ಸಾವುನೋವುಗಳಾಗಿರುವುದನ್ನು ಮಣಿಪುರವು ಎಂದೂ ಕಂಡಿಲ್ಲ. CRPF ಹಾಗೂ ಮೈಥೇಯಿ ಪ್ರಾಬಲ್ಯದ ರಾಜ್ಯ ಪೊಲೀಸ್ ಪಡೆಗಳು ದಾಳಿ ನಡೆಸಿ, ಗ್ರಾಮದ ಎಲ್ಲಾ ಸ್ವಯಂಸೇವಕರನ್ನು ಹತ್ಯೆಗೈದಿವೆ’’ ಎಂದು ಐಟಿಎಲ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

‘‘ಒಂದು ವೇಳೆ ಸ್ವಯಂಸೇವಕರು ನಿಜಕ್ಕೂ ಶಸ್ತ್ರಸಜ್ಜಿತರಾಗಿದ್ದಲ್ಲಿ ಹಾಗೂ ಭದ್ರತಾಪಡೆಗಳ ಮೇಲೆ ದಾಳಿಯನ್ನು ನಡೆಸುವ ಉದ್ದೇಶವನ್ನು ಹೊಂದಿದ್ದರೆ, ಒಂದೇ ಘಟನೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ದೂರದಿಂದಲೇ ಇಷ್ಟೊಂದು ಮಂದಿಯನ್ನು ಕೊಲ್ಲಲು ಸಾಧ್ಯವಿರುತ್ತಿರಲಿಲ್ಲ’’ ಎಂದು ಸಂಘಟನೆಯು ಹೇಳಿದೆ.

ಈ ಮಧ್ಯೆ ಮಣಿಪುರ ಪೊಲೀಸರು, ಎನ್‌ಕೌಂಟರ್‌ ನಲ್ಲಿ ಸಾವನ್ನಪ್ಪಿದ ಎಲ್ಲಾ 10 ಮಂದಿ, ಜಿರ್‌ ಬಾಮ್ ಜಿಲ್ಲೆಯಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಸಾಧ್ಯವಿರುವಷ್ಟು ಪ್ರಮಾಣದ ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ. ಯಾರೇ ಗುಂಡಿನ ದಾಳಿ ನಡೆಸಿದಲ್ಲಿ ಮಣಿಪುರ ಪೊಲೀಸರು, ಅಸ್ಸಾಂ ರೈಫಲ್ಸ್ ಹಾಗೂ ಕೇಂದ್ರೀಯ ಮೀಸಲು ಪಡೆಗಳು ಪ್ರತಿದಾಳಿ ನಡೆಸಲಿವೆಯೆಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News