ಮತ್ತೆ ಭುಗಿಲೆದ್ದ ಹಿಂಸೆ | ಮಣಿಪುರಕ್ಕೆ 20 ಹೆಚ್ಚುವರಿ ಅರೆ ಸೇನಾ ಪಡೆ ಕಂಪೆನಿಗಳ ರವಾನೆ
ಹೊಸದಿಲ್ಲಿ : ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಉಲ್ಬಣಗೊಳ್ಳುತ್ತಿರುವಂತೆಯೇ ಕೇಂದ್ರ ಸರಕಾರವು ಸುಮಾರು 2,500 ಯೋಧರನ್ನು ಒಳಗೊಂಡ 20 ಹೆಚ್ಚುವರಿ ಅರೆ ಸೇನಾ ಪಡೆಗಳ ಕಂಪೆನಿಗಳನ್ನು ರಾಜ್ಯಕ್ಕೆ ಕಳುಹಿಸಿದೆ.
ರಾಜ್ಯದಲ್ಲಿ ನೆಲೆಸಿರುವ ‘‘ಸವಾಲಿನ ಪರಿಸ್ಥಿತಿ’’ಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪಡೆಗಳ ನಿಯೋಜನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದರು. ‘‘ಮಣಿಪುರಕ್ಕೆ ಕಳುಹಿಸಲಾಗಿರುವ 20 ಕಂಪೆನಿಗಳ ಪೈಕಿ 15 ಕಂಪೆನಿಗಳು ಸಿಆರ್‌ಪಿಎಫ್ ಮತ್ತು ಐದು ಕಂಪೆನಿಗಳು ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಗೆ ಸೇರಿವೆ. ರಾಜ್ಯದಲ್ಲಿ ಆಗಾಗ ಹಿಂಸಾಚಾರ ಸಂಭವಿಸುತ್ತದೆ. ಈ ಕಂಪೆನಿಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು’’ ಎಂದು ಅವರು ಹೇಳಿದರು.
ಓರ್ವ ನಿರ್ವಸಿತ ಮೈಥೇಯಿ ಮಹಿಳೆ, ಅವರ ಇಬ್ಬರು ಪುತ್ರಿಯರು ಮತ್ತು ಮೂವರು ಮೊಮ್ಮಕ್ಕಳನ್ನು ಸೋಮವಾರ ಬಂಡುಕೋರರು ಅಪಹರಿಸಿದ್ದಾರೆ. ಕಳೆದ ವರ್ಷ ಮೈಥೇಯಿ ಮತ್ತು ಕುಕಿ ಜನಾಂಗೀಯರ ನಡುವೆ ಜನಾಂಗೀಯ ಸಂಘರ್ಷ ಸ್ಫೋಟಿಸಿದ ಬಳಿಕ ನಿರ್ವಸಿತರಾದ ಸುಮಾರು 50,000 ಜನರಲ್ಲಿ ಈ ಆರು ಮಂದಿಯೂ ಸೇರಿದ್ದಾರೆ.
ಮಧ್ಯಪ್ರವೇಶಿಸಿ ಈ ಆರು ಮಂದಿಯನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಒತ್ತಾಯಿಸುವ ಸಂದೇಶವೊಂದನ್ನು ಮಣಿಪುರದ ರಾಜ್ಯಸಭಾ ಸದಸ್ಯ ಸನಜವೋಬ ಲೈಶೆಂಬ ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿದ್ದಾರೆ.
ಅಸ್ಸಾಮ್ ಗಡಿಯಲ್ಲಿರುವ ಜಿರಿಬಮ್ ಜಿಲ್ಲೆಯಲ್ಲಿ, ಕಳೆದ ಗುರುವಾರ ಮೈಥೇಯಿ ಬಂಡುಕೋರ ಗುಂಪು ಅರಂಬೈ ಟೆಂಗೋಲ್‌ನ ಓರ್ವ ಸದಸ್ಯನು ಹಮರ್ ಬುಡಕಟ್ಟು ಮಹಿಳೆಯೊಬ್ಬರ ಮೇಲೆ ಅತ್ಯಾಚಾರಗೈದು ಕೊಂದಿದ್ದಾನೆ ಎನ್ನಲಾಗಿದೆ.
ಕಳೆದ ವಾರ ನಡೆದ ಘಟನೆಗಳ ಬಳಿಕ, ಮೈಥೇಯಿ ಮತ್ತು ಕುಕಿ-ರೊ ಗುಂಪುಗಳು ಪರಸ್ಪರರ ವಿರುದ್ಧ ದಾಳಿ ನಡೆಸಲು ಹತಾಶ ಪ್ರಯತ್ನಗಳನ್ನು ನಡೆಸುತ್ತಿವೆ.