ಮಣಿಪುರ ಬಂದ್ : ಸಾಮಾನ್ಯ ಜನಜೀವನ ಅಸ್ತವ್ಯಸ್ತ
ಇಂಫಾಲ : ಕುಕಿ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್ ನಿಂದ ಮಣಿಪುರದ ಬುಡಕಟ್ಟು ಪ್ರಾಬಲ್ಯದ ಚುರಾಚಂದಪುರ ಜಿಲ್ಲೆಯಲ್ಲಿ ಸಾಮಾಜಿಕ ಜನಜೀವನ ಅಸ್ತವ್ಯಸ್ತಗೊಂಡಿತು.
ಈ ಪ್ರದೇಶದಿಂದ ಇಬ್ಬರು ಅಪ್ರಾಪ್ತರು ಸೇರಿದಂತೆ 7 ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹಾಗೂ ಸಿಬಿಐ ಬಂಧಿಸಿರುವುದನ್ನು ವಿರೋಧಿಸಿ ಕುಕಿ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದವು.
ಈ ವರ್ಷ ಜುಲೈಯಲ್ಲಿ ಮಣಿಪುರದ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಹತ್ಯೆಗೈದ ಪ್ರಕರಣದ ಶಂಕಿತರು ಕೂಡ ಈ ಬಂಧಿತರಲ್ಲಿ ಇದ್ದಾರೆ. ಹತ್ಯೆಯಾದ ಇಬ್ಬರು ವಿದ್ಯಾರ್ಥಿಗಳ ಭಾವಚಿತ್ರ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದ ಬಳಿಕ ಇಂಫಾಲದಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಚುರಾಚಂದ್ಪುರದಲ್ಲಿ ಸರಕಾರಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಮಾರುಕಟ್ಟೆ ಹಾಗೂ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ವಿರುದ್ಧ ಹಾಗೂ ಬಂಧಿತರನ್ನು 48 ಗಂಟೆಗಳ ಒಳಗೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಇಂಡಿಜೀನಿಯಸ್ ಟ್ರೈಬಲ್ ಲೀಡರ್ಸ್ ಫಾರಂ (ಐಟಿಎಲ್ಎಫ್) ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಯಿಂದ 2 ಗಂಟೆ ವರೆಗೆ ಬಂದ್ ಗೆ ಕರೆ ನೀಡಿತ್ತು. ಚುರಾಚಂದಪುರ ಮೂಲದ ಜಾಯಿಂಟ್ ಸ್ಟೂಡೆಂಟ್ಸ್ ಬಾಡಿ (ಜೆಎಸ್ ಬಿ) ಕೂಡ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯಿಂದ 12 ಗಂಟೆಗಳ ಬಂದ್ ಗೆ ಕರೆ ನೀಡಿತ್ತು.