ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆ ದೀರ್ಘ ಕಾಲದಿಂದ ಬಾಕಿ ಇತ್ತು: ಪ್ರಿಯಾಂಕಾ ಗಾಂಧಿ
Update: 2025-02-10 13:54 IST

ಪ್ರಿಯಾಂಕಾ ಗಾಂಧಿ (PTI)
ಮಲಪ್ಪುರಂ (ಕೇರಳ): ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರ ರಾಜೀನಾಮೆ ದೀರ್ಘ ಕಾಲದಿಂದ ಬಾಕಿ ಇತ್ತು ಎಂದು ಸೋಮವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಎನ್.ಬಿರೇನ್ ಸಿಂಗ್ ರಾಜೀನಾಮೆ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, “ಕಳೆದೆರಡು ವರ್ಷಗಳಿಂದ ಈ ರಾಜೀನಾಮೆ ಬಾಕಿ ಇತ್ತು. ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಈಗಲೂ ಹಿಂಸಾಚಾರ ಮುಂದುವರಿದಿದೆ” ಎಂದು ಉತ್ತರಿಸಿದರು.
ರವಿವಾರ ರಾಜಭವನಕ್ಕೆ ತೆರಳಿದ್ದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾಗೆ ಸಲ್ಲಿಸಿದ್ದರು.
ಮೇ 2023ರಲ್ಲಿ ಮಣಿಪುರದಲ್ಲಿ ಸ್ಫೋಟಗೊಂಡಿದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.