ಸಾಮಾಜಿಕ ಮಾಧ್ಯಮ ಗುಂಪುಗಳಿಂದ ಹೊರಬರಲು ಅಧಿಕಾರಿಗಳಿಗೆ ಮಣಿಪುರ ಸರಕಾರ ಸೂಚನೆ

Update: 2023-08-14 14:05 GMT

ಸಾಂದರ್ಭಿಕ ಚಿತ್ರ.| Photo: PTI  

ಶಿಲಾಂಗ್: ‘‘ಪ್ರತ್ಯೇಕತಾವಾದಿ, ರಾಷ್ಟ್ರವಿರೋಧಿ, ಕೋಮುವಾದಿ ಮತ್ತು ವಿಭಜಕ ಕಾರ್ಯಸೂಚಿಗಳನ್ನು’’ ಹೊಂದಿರುವ ಸಾಮಾಜಿಕ ಮಾಧ್ಯಮ ಗುಂಪುಗಳಿಂದ ಹೊರಬರುವಂತೆ ಮಣಿಪುರ ಸರಕಾರವು ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಈ ನಿರ್ದೇಶನವನ್ನು ವಿಶೇಷ ಕಾರ್ಯದರ್ಶಿ (ಗೃಹ) ಎಚ್. ಜ್ಞಾನಪ್ರಕಾಶ್ ಆಗಸ್ಟ್ 10ರಂದು ಹೊರಡಿಸಿದ್ದಾರೆ. ಮಣಿಪುರ ಸರಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಈಶಾನ್ಯ ರಾಜ್ಯದಲ್ಲಿ ಮೇ 3ರಂದು ಕುಕಿ ಮತ್ತು ಮೆತೈ ಜನಾಂಗೀಯ ಗುಂಪುಗಳ ನಡುವೆ ಸಂಘರ್ಷ ಸ್ಫೋಟಗೊಂಡ ಬಳಿಕ ಕನಿಷ್ಠ 187 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸುಮಾರು 60,000 ಮಂದಿ ಮನೆಗಳನ್ನು ತೊರೆದಿದ್ದಾರೆ.

ಭದ್ರತಾ ಪಡೆಗಳು ಮತ್ತು ಅಧಿಕಾರಶಾಹಿಯಲ್ಲೂ ಜನಾಂಗೀಯ ಆಧಾರದಲ್ಲಿ ವಿಭಜನೆಗಳು ಸಂಭವಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘‘ಫೇಸ್ಬುಕ್, ವಾಟ್ಸ್ಆ್ಯಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿರುವ ಗುಂಪುಗಳು ಮತ್ತು ಇತರ ಚಾಟ್ ಗ್ರೂಪ್ಗಳಲ್ಲಿ ಪ್ರತ್ಯೇಕತಾವಾದಿ, ರಾಷ್ಟ್ರವಿರೋಧಿ, ರಾಜ್ಯವಿರೋಧಿ, ಸಮಾಜವಿರೋಧಿ, ಕೋಮುವಾದಿ ಮತ್ತು ವಿಭಜಕ ಕಾರ್ಯಸೂಚಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇದು ಸಾಮಾಜಿಕ ಸಾಮರಸ್ಯ ಹಾಗೂ ಕಾನೂನು ಮತ್ತು ವ್ಯವಸ್ಥೆ ಪರಿಪಾಲನೆಗೆ ತೊಡಕಾಗಿ ಪರಿಣಮಿಸಿದೆ ಎನ್ನುವುದನ್ನು ಗಮನಿಸಲಾಗಿದೆ’’ ಎಂದು ಮಣಿಪುರ ಸರಕಾರ ತನ್ನ ನಿರ್ದೇಶನದಲ್ಲಿ ಹೇಳಿದೆ.

ಹಲವು ಸರಕಾರಿ ಅಧಿಕಾರಿಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ಗುಂಪುಗಳ ಸದಸ್ಯರಾಗಿದ್ದಾರೆ ಎಂದು ಅದು ತಿಳಿಸಿದೆ. ಪ್ರತ್ಯೇಕತಾವಾದಿ ಅಥವಾ ವಿಭಜಕ ಕಾರ್ಯಸೂಚಿಗಳಿಗೆ ಉತ್ತೇಜನ ನೀಡುವ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಸರಕಾರಿ ಅಧಿಕಾರಿಗಳು ಭಾಗವಹಿಸುವುದನ್ನು ಸೇವಾ ನಿಯಮಗಳಿಗೆ ವಿರುದ್ಧ ಎಂಬುದಾಗಿ ಪರಿಗಣಿಸಬಹುದಾಗಿದೆ ಎಂದು ಅದು ಹೇಳಿದೆ.

ಸರಕಾರಿ ಅಧಿಕಾರಿಗಳು ಇಂಥ ಗುಂಪುಗಳಿಂದ 48 ಗಂಟೆಗಳಲ್ಲಿ ಹೊರಬರದಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News