ಮಣಿಪುರ ಇಬ್ಭಾಗವಾಗಿದೆ; ಪರಿಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ : ರಾಹುಲ್ ಗಾಂಧಿ
ಇಂಫಾಲ: ಮಣಿಪುರದಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು ಹಾಗೂ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ಸಂತ್ರಸ್ತರೊಂದಿಗೆ ಸಂವಹನ ನಡೆಸಿದ್ದರು.
ಮಣಿಪುರ ಭೇಟಿ ಕುರಿತಂತೆ ತನ್ನ ‘ಎಕ್ಸ್’ನ ಖಾತೆಯಲ್ಲಿ ವೀಡಿಯೊ ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ನಾನು ಮಣಿಪುರಕ್ಕೆ ಭೇಟಿ ನೀಡಿರುವುದು ಇದು ಮೂರನೇ ಬಾರಿ. ಆದರೆ, ದುರಾದೃಷ್ಟವೆಂದರೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದು ಕೂಡ ರಾಜ್ಯ ಇಬ್ಭಾಗವಾಗಿಯೇ ಇದೆ ಎಂದಿದ್ದಾರೆ.
‘‘ಮನೆಗಳು ಹೊತ್ತಿ ಉರಿಯುತ್ತಿವೆ, ಅಮಾಯಕರು ಅಪಾಯದಲ್ಲಿದ್ದಾರೆ. ಸಾವಿರಾರು ಕುಟುಂಬಗಳು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕು ಹಾಗೂ ರಾಜ್ಯದ ಜನರ ಸಮಸ್ಯೆ ಆಲಿಸಬೇಕು. ಅವರಲ್ಲಿ ಶಾಂತಿಗಾಗಿ ಮನವಿ ಮಾಡಬೇಕು’’ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಶಾಂತಿಯ ಅಗತ್ಯತೆ ಕುರಿತು ಕಾಂಗ್ರೆಸ್ ಹಾಗೂ ಇಂಡಿಯಾ ಸಂಸತ್ತಿನಲ್ಲಿ ಧ್ವನಿ ಎತ್ತಲಿದೆ. ಆ ಮೂಲಕ ಅಲ್ಲಿನ ಸಮಸ್ಯೆಯನ್ನು ಅಂತ್ಯಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಲಿದೆ ಎಂದು ಅವರು ತಿಳಿಸಿದರು.
ಈ ವೀಡಿಯೊದಲ್ಲಿ ರಾಹುಲ್ ಗಾಂಧಿ ವಿವಿಧ ಪರಿಹಾರ ಕೇಂದ್ರಗಳ ಜನರೊಂದಿಗೆ ಸಂವಹನ ನಡೆಸುತ್ತಿರುವುದು ಕಂಡು ಬಂದಿದೆ. ಜನರು ತಮ್ಮ ಸಂಕಷ್ಟ ಹಾಗೂ ಭೀತಿಯನ್ನು ಅವರಲ್ಲಿ ಹಂಚಿಕೊಳ್ಳುತ್ತಿರುವುದು ಹಾಗೂ ತಮಗಾಗಿ ಹೋರಾಡುವಂತೆ, ಧ್ವನಿ ಎತ್ತುವಂತೆ ಆಗ್ರಹಿಸುತ್ತಿರುವುದು ಕೂಡ ಕಂಡು ಬಂದಿದೆ.
ಮಣಿಪುರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಹಾಗೂ ಅದರ ಸಂಸದರು ಸಂಸತ್ತಿನ ಇತ್ತೀಚೆಗಿನ ಅಧಿವೇಶನದಲ್ಲಿ ಎತ್ತಿದ್ದೇವೆ ಎಂದು ರಾಹುಲ್ ಗಾಂಧಿ ಜನರಲ್ಲಿ ಹೇಳುತ್ತಿರುವುದು, ಅಲ್ಲದೆ, ಮುಂದಿನ ಅಧಿವೇಶನದಲ್ಲಿ ಮತ್ತೊಮ್ಮೆ ಎತ್ತಲಾಗುವುದು ಎಂದು ಅವರಿಗೆ ಭರವಸೆ ನೀಡುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.