ಭಾರತೀಯ ವಲಸಿಗರ ಕುರಿತು ಎಲಾನ್ ಮಸ್ಕ್ ಮತ್ತು ಟ್ರಂಪ್ ಬೆಂಬಲಿಗರ ನಡುವೆ ಬಿರುಕು
ಹೊಸದಿಲ್ಲಿ: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಎಲಾನ್ ಮಸ್ಕ್, ವಿವೇಕ್ ರಾಮಸ್ವಾಮಿ ಮತ್ತು ಅವರ ಟೆಕ್ ಮಿತ್ರರೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾರೆ. ವಲಸೆ ಈ ಸಂಘರ್ಷದ ಕೇಂದ್ರ ಬಿಂದುವಾಗಿದೆ. ಒಂದೆಡೆ ಮಸ್ಕ್ ಮತ್ತು ಅವರ ಸಿಲಿಕಾನ್ ವ್ಯಾಲಿ ಮಿತ್ರರು ಅರ್ಹತೆ ಆಧಾರಿತ ವಲಸೆ ಸುಧಾರಣೆಗಳನ್ನು ಪ್ರತಿಪಾದಿಸುತ್ತಿದ್ದರೆ ಇನ್ನೊಂದೆಡೆ ವಲಸೆ ವಿರೋಧಿ ನೀತಿಗೆ ಬದ್ಧರಾಗಿರುವ ಟ್ರಂಪ್ ಕಟ್ಟಾ ಬೆಂಬಲಿಗರು ಮಸ್ಕ್ ನಿಲುವನ್ನು ತಾವು ನಂಬಿಕೊಂಡಿರುವ ಜನಪ್ರಿಯ ಸಿದ್ಧಾಂತಕ್ಕೆ ದ್ರೋಹವಾಗಿದೆ ಎಂದು ಪರಿಗಣಿಸುತ್ತಿದ್ದಾರೆ.
ಮುಂಬರುವ ಟ್ರಂಪ್ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (AI) ನೀತಿಯನ್ನು ಮುನ್ನಡೆಸಲು ಭಾರತ ಮೂಲದ ವೆಂಚರ್ ಕ್ಯಾಪಿಟಲಿಸ್ಟ್ ಹಾಗೂ ಮಸ್ಕ್ ಮಿತ್ರ ಶ್ರೀರಾಮ ಕೃಷ್ಣನ್ ನೇಮಕದ ಬಳಿಕ ಈ ಬಿರುಕುಗಳು ಎದ್ದು ಕಾಣಿಸತೊಡಗಿವೆ. ಅನುಭವಿ ವಲಸಿಗರಿಗೆ ಗ್ರೀನ್ ಕಾರ್ಡ್‌ಗಳ ಮೇಲಿನ ಮಿತಿಯನ್ನು ತೆಗೆದುಹಾಕುವಂತೆ ಪ್ರತಿಪಾದಿಸಿ ಕೃಷ್ಣನ್ ಅವರ ಹಿಂದಿನ ಹೇಳಿಕೆಗಳನ್ನು ಟ್ರಂಪ್ ಬೆಂಬಲಿಗರು ಮತ್ತೆ ನೆನಪಿಸಿದ್ದು,ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಾಗ್ಯುದ್ಧವನ್ನು ಹುಟ್ಟಿಹಾಕಿದೆ.
ಬಲಪಂಥೀಯ ಸಾಮಾಜಿಕ ಮಾಧ್ಯಮ ನಿರೂಪಕಿ ಲಾರಾ ಲೂಮರ್ ಅವರು ಕೃಷ್ಣ್‌ನ್ ನೇಮಕವನ್ನು ‘ಅತ್ಯಂತ ಆತಂಕಕಾರಿ’ ಎಂದು ಬಣ್ಣಿಸಿದ್ದಾರೆ. ಮಸ್ಕ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿಯ ಹಲವಾರು ಪರಿಶೀಲಿತ ಖಾತೆಗಳು ಲೂಮರ್ ಟೀಕೆಯನ್ನು ಎತ್ತಿ ತೋರಿಸಿದ್ದು, ಇದು ಉಭಯ ಬಣಗಳ ನಡುವೆ ಸಂಘರ್ಷಕ್ಕೆ ರಂಗವನ್ನು ಸಜ್ಜುಗೊಳಿಸಿದೆ.
ಸ್ವತಃ ಎಚ್-1ಬಿ ವೀಸಾದಲ್ಲಿ ಅಮೆರಿಕಕ್ಕೆ ವಲಸೆ ಬಂದಿದ್ದ ಮಸ್ಕ್, ಉನ್ನತ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವ ಪರಿಕಲ್ಪನೆಯನ್ನು ನಿರಂತರವಾಗಿ ಪ್ರತಿಪಾದಿಸಿದ್ದಾರೆ. ಅಮೆರಿಕದ ತಾಂತ್ರಿಕ ಮತ್ತು ಆರ್ಥಿಕ ಪ್ರಾಬಲ್ಯವು ವಿಶ್ವಾದ್ಯಂತದ ಅತ್ಯುತ್ತಮ ಪ್ರತಿಭೆಗಳನ್ನು ನೇಮಿಸಿಕೊಳ್ಳುವ ಅದರ ಸಾಮರ್ಥ್ಯವನ್ನು ಅವಲಂಬಿಸಿದೆ ಎನ್ನುವುದು ಅವರ ವಾದವಾಗಿದೆ.
‘ನಿಮ್ಮ ತಂಡವು ಚಾಂಪಿಯನ್‌ಶಿಪ್ ಗೆಲ್ಲಬೇಕೆಂದು ನೀವು ಬಯಸಿದ್ದರೆ ಉನ್ನತ ಪ್ರತಿಭೆಗಳು ಎಲ್ಲಿದ್ದರೂ ಸರಿ,ಅವರನ್ನು ನೀವು ನೇಮಿಸಿಕೊಳ್ಳಬೇಕು’ ಎಂದು ಮಸ್ಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸರಕಾರದ ದಕ್ಷತೆ ಇಲಾಖೆಯ ಸಹ-ಅಧ್ಯಕ್ಷರಾಗಿ ಟ್ರಂಪ್ ಅವರಿಂದ ಹೊಸದಾಗಿ ನೇಮಕಗೊಂಡಿರುವ ವಿವೇಕ ರಾಮಸ್ವಾಮಿಯವರು ಮಸ್ಕ್ ಅವರ ಭಾವನೆಗಳನ್ನು ಪ್ರತಿಧ್ವನಿಸಿದ್ದಾರೆ. ವಲಸಿಗ ಭಾರತೀಯ ದಂಪತಿಯ ಪುತ್ರರಾಗಿರುವ ರಾಮಸ್ವಾಮಿ,‘ಅಮೆರಿಕದ ಸಂಸ್ಕೃತಿಯು ಸುದೀರ್ಘ ಕಾಲದಿಂದಲೂ ಶ್ರೇಷ್ಠತೆಗಿಂತ ಸಾಮಾನ್ಯತೆಯನ್ನೇ ಸಂಭ್ರಮಿಸುತ್ತ ಬಂದಿದೆ. ಗಣಿತ ಒಲಿಂಪಿಯಾಡ್ ಚಾಂಪಿಯನ್ ವಿಜಯವನ್ನು ಸಂಭ್ರಮಿಸುವ ಸಂಸ್ಕೃತಿಯು ಅತ್ಯುತ್ತಮ ಇಂಜಿನಿಯರ್‌ಗಳನ್ನು ಉತ್ಪಾದಿಸುವುದಿಲ್ಲ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆದರೆ ಈ ನಿಲುವುಗಳು ಟ್ರಂಪ್ ಅವರ ಅತ್ಯಂತ ನಿಷ್ಠಾವಂತ ಬೆಂಬಲಿಗರಿಂದ ಹಿನ್ನಡೆಯನ್ನು ಅನುಭವಿಸಿವೆ. ಲೂಮರ್ ಜೊತೆಗೆ ಆ್ಯನ್ ಕೌಲ್ಟರ್ ಮತ್ತು ಮಾಜಿ ಕಾಂಗ್ರೆಸಿಗ ಮ್ಯಾಟ್ ಗೇಟ್ಜ್ ಅವರಂತಹ ತೀವ್ರ ಬಲಪಂಥೀಯ ಗಣ್ಯರು ಮಸ್ಕ್ ಮತ್ತು ರಾಮಸ್ವಾಮಿ ಅಮೆರಿಕದ ಉದ್ಯೋಗಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೈರಲ್ ಪೋಸ್ಟ್ ಕೃಷ್ಣನ್ ಅವರನ್ನು ಅಮೆರಿಕದ ಉದ್ಯೋಗಿಗಳನ್ನು ಬದಲಿಸುವ ಗುರಿಯನ್ನು ಹೊಂದಿರುವ ‘ಇಂಡಿಯಾ ಫಸ್ಟ್’ ಆಪರೇಟಿವ್ ಎಂದು ಆರೋಪಿಸಿದೆ.
ವಿಶ್ವಸಂಸ್ಥೆಯಲ್ಲಿ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರೂ ಕಣವನ್ನು ಪ್ರವೇಶಿಸಿದ್ದು,ತನ್ನ ದೇಶದ ಪ್ರತಿಭೆಗಳ ಮೇಲೆ ಹೂಡಿಕೆಗೆ ಅಮೆರಿಕವು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ರಾಮಸ್ವಾಮಿಯವರ ಟೀಕೆಗೆ ಸವಾಲೆಸೆದಿರುವ ಅವರು,ಅಮೆರಿಕದ ಉದ್ಯೋಗಿಗಳು ಅಥವಾ ಅಮೆರಿಕದ ಸಂಸ್ಕೃತಿಯೊಂದಿಗೆ ಯಾವುದೇ ತಪ್ಪಿಲ್ಲ ’ಎಂದು ಪೋಸ್ಟ್ ಮಾಡಿದ್ದಾರೆ.
ವಲಸಿಗರ ಕುರಿತು ಟ್ರಂಪ್ ಅವರ ಆಗಾಗ್ಗೆ ಬದಲಾಗುತ್ತಿರುವ ನಿಲುವು ಈ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ. ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ಎಚ್-1ಬಿ ವೀಸಾಗಳ ಮೇಲೆ ಗಮನಾರ್ಹ ನಿರ್ಬಂಧಗಳನ್ನು ಹೇರಲಾಗಿದ್ದರೆ ಅವರ ಇತ್ತೀಚಿನ ಹೇಳಿಕೆಗಳು ಮೃದು ನಿಲುವನ್ನು ಸೂಚಿಸುತ್ತಿವೆ. ಈ ವರ್ಷದ ಪೂರ್ವಾರ್ಧದಲ್ಲಿ ಪಾಡಕಾಸ್ಟ್‌ವೊಂದರಲ್ಲಿ ಟ್ರಂಪ್ ಅಮೆರಿಕದ ವಿವಿಗಳಿಂದ ಪದವಿಗಳನ್ನು ಗಳಿಸುವ ವಿದೇಶಿಗರಿಗೆ ಗ್ರೀನ್ ಕಾರ್ಡ್‌ಗಳ ಮಂಜೂರಾತಿಯನ್ನು ಬೆಂಬಲಿಸಿದ್ದರು. ಅವರ ನಿಲುವಿನಲ್ಲಿಯ ಈ ಬದಲಾವಣೆಯು ಅವರ ಭವಿಷ್ಯದ ವಲಸೆ ನೀತಿಗಳ ಕುರಿತು ಅವರ ಪಾಳಯದಲ್ಲಿಯ ಹಲವರನ್ನು ಅನಿಶ್ಚಿತತೆಯಲ್ಲಿರಿಸಿದೆ.