ಮಣಿಪುರ: ನಾಲ್ವರ ಅಪಹರಣ, ಗುಂಡಿನ ಕಾಳಗದಲ್ಲಿ 7 ಮಂದಿಗೆ ಗಾಯ

Update: 2023-11-08 14:43 GMT

ಸಾಂದರ್ಭಿಕ ಚಿತ್ರ

ಇಂಫಾಲ: ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಮಂಗಳವಾರ ಮೇತೈ ಬಂಡುಕೋರರು ಎನ್ನಲಾದವರು ಓರ್ವ ಸೈನಿಕನ ಮೂವರು ಸಂಬಂಧಿಗಳು ಸೇರಿದಂತೆ ನಾಲ್ವರನ್ನು ಅಪಹರಿಸಿದ್ದಾರೆ. ಇದರೊಂದಿಗೆ ಮಣಿಪುರದ ಸ್ಥಿತಿ ಮತ್ತೆ ಉದ್ವಿಗ್ನವಾಗಿದೆ.

ಅಪರಹಣದ ಸುದ್ದಿ ಹರಡುತ್ತಿದ್ದಂತೆಯೇ, ಶಸ್ತ್ರಧಾರಿ ಕುಕಿ ಬಂಡುಕೋರರು ಕಾಂಗ್‌ಚುಪ್ ಪ್ರದೇಶದಲ್ಲಿ ಜನರ ಗುಂಪೊಂದರ ಮೇಲೆ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ಮಹಿಳೆ ಸೇರಿದಂತೆ ಏಳು ಮಂದಿ ಗಾಯಗೊಂಡರು.

ಬಂಡುಕೋರರಿಂದ ಅಪಹರಣಕ್ಕೀಡಾಗಿದ್ದ 65 ವರ್ಷದ ವ್ಯಕ್ತಿಯೊಬ್ಬರನ್ನು ಭದ್ರತ ಪಡೆಗಳು ಬಳಿಕ ರಕ್ಷಿಸಿವೆ. ಉಳಿದ ನಾಲ್ವರ ಪರಿಸ್ಥಿತಿ ಏನಾಗಿದೆ ಎನ್ನುವುದು ತಿಳಿದಿಲ್ಲ.

‘‘ಐವರು ಕುಕಿ ಸಮುದಾಯದ ವ್ಯಕ್ತಿಗಳು ಚುರಚಾಂದ್‌ಪುರದಿಂದ ಕಾಂಗ್‌ಪೊಕ್ಪಿ (ಎರಡೂ ಕುಕಿ ಪ್ರಾಬಲ್ಯದ ಜಿಲ್ಲೆಗಳು)ಗೆ ಪ್ರಯಾಣಿಸುತ್ತಿದ್ದರು. ಅವರು ಇಂಫಾಲ್ ಪಶ್ಚಿಮ (ಮೆತೈ ಪ್ರಾಬಲ್ಯದ ಜಿಲ್ಲೆ)ವನ್ನು ಪ್ರವೇಶಿಸಿದಾಗ ಮೆತೈಗಳ ಗುಂಪೊಂದು ಅವರನ್ನು ತಡೆದು ಆಕ್ರಮಣ ಮಾಡಿತು’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘‘ಬಳಿಕ ಭದ್ರತಾ ಪಡೆಗಳು ಓರ್ವ ವ್ಯಕ್ತಿಯನ್ನು ರಕ್ಷಿಸಿದವು. ಅವರಿಗೆ ಗಾಯಗಳಾಗಿವೆ. ಇತರ ನಾಲ್ವರ ಬಗ್ಗೆ ಗೊತ್ತಾಗಿಲ್ಲ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News